ಪಾಟ್ನಾ: ಬಹುಕೋಟಿ ವೆಚ್ಚದ ಈ ಸೇತುವೆ ನಿರ್ಮಾಣ ಮಾಡಿ ಕೆಲವೇ ತಿಂಗಳು ಆಗಿದೆ. ಆದರೆ, ಆಗಲೇ ಈ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಸರ್ಕಾರದ 263 ಕೋಟಿ ರೂ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.
ಗೋಪಾಲ್‌ಗಂಜ್ ಜಿಲ್ಲೆಯ ಗಂಡಕ್ ನದಿಯಲ್ಲಿರುವ ಸತ್ತರ್‌ಘಾಟ್ ಸೇತುವೆಯನ್ನ ಜೂನ್ 16 ರಂದು ಮುಖ್ಯಮಂತ್ರಿ ಕುಮಾರ್ ಉದ್ಘಾಟಿಸಿದ್ದರು. ಉದ್ಘಾಟನೆ ಆಗಿ ಒಂದು ತಿಂಗಳಲ್ಲೇ ಸೇತುವೆ ಕೊಚ್ಚಿಕೊಂಡು ಹೋಗಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ರಾಷ್ಟ್ರೀಯ ಜನತಾದಳ ಮುಖಂಡ ತೇಜಸ್ವಿ ಯಾದವ್ ಮತ್ತು ಬಿಹಾರ ಕಾಂಗ್ರೆಸ್ ಮುಖ್ಯಸ್ಥ ಮದನ್ ಮೋಹನ್ ಜಾ ಸಿಎಂ ನಿತೀಶ್ ಕುಮಾರ್ ಅವರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
"8 ವರ್ಷಗಳಲ್ಲಿ 263.47 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ಉದ್ಘಾಟನೆಗೊಂಡ 29 ದಿನಗಳ ನಂತರ ಸೇತುವೆ ಕುಸಿದಿದೆ. ಹುಷಾರಾಗಿರಿ!. ಇದು ನಿತೀಶ್ ಜಿ ಅವರ ಭ್ರಷ್ಟಾಚಾರದ ಒಂದು ನೋಟವಷ್ಟೇ ಎಂದು ತೇಜಸ್ವಿ ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ಮುಖಂಡ ಮದನ್ ಮೋಹನ್ ಸಹ ಇಂತಹದ್ದೇ ರೀತಿಯಲ್ಲಿ ಟ್ವೀಟ್ ಮಾಡಿ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 2017 ರಲ್ಲಿ, ನಿತೀಶ್ ಕುಮಾರ್ ಅವರ ಸಂಪುಟದ ಸಚಿವರೊಬ್ಬರು ಇಲಿಗಳು ಒಡ್ಡುಗಳಲ್ಲಿ ರಂಧ್ರಗಳನ್ನು ಮಾಡಿ ದುರ್ಬಲಗೊಳಿಸಿವೆ. ಇದು ಪ್ರವಾಹದಿಂದ ಆಗುವ ಬಾರಿ ನಷ್ಟಕ್ಕೆ ಕಾರಣವಾಗಿದೆ ಎಂದು ತಮ್ಮ ನಿಲುವನ್ನ ಸಮರ್ಥಿಸಿಕೊಂಡಿದ್ದರು. ಇನ್ನು ವಶಕ್ಕೆ ಪಡೆದ ಮದ್ಯದ ಬಾಟಲ್ಗಳ ಕಾಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಪೊಲೀಸ್ ಇಲಾಖೆ, ಬಾಟಲಿಗಳು ಕಾಣೆಯಾಗುವುದಕ್ಕೆ ಇಲಿಗಳು ಕಾರಣ ಎಂದು ಹೇಳಿದ್ದರು. ಈ ಎಲ್ಲ ಹೇಳಿಕೆಗಳಿಗೆ ಉಭಯ ನಾಯಕರು ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.