(ಪಾಟ್ನಾ) ಬಿಹಾರ: ಪಾಟ್ನಾದಲ್ಲಿ ರಾಜಕೀಯ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ 'ಬಿಹಾರ್ ಕಿ ಬಾತ್' ಅಭಿಯಾನದಲ್ಲಿ ಕೃತಿಚೌರ್ಯದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಪಾಟಲಿಪುತ್ರ ಪೊಲೀಸ್ ಠಾಣೆಯಲ್ಲಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ವಿರುದ್ಧ ವಂಚನೆ ಮತ್ತು ಕೃತಿಚೌರ್ಯದ ಪ್ರಕರಣ ದಾಖಲಾಗಿದೆ. ನನ್ನ ವಿಷಯವನ್ನು ಪ್ರಶಾಂತ್ ಕಿಶೋರ್ ತಮ್ಮ 'ಬಿಹಾರ್ ಕಿ ಬಾತ್' ಅಭಿಯಾನಕ್ಕೆ ಬಳಸಿದ್ದಾರೆ ಎಂದು ಶಾಶ್ವತ್ ಗೌತಮ್ ಎಂಬುವವರು ದೂರು ನೀಡಿದ್ದಾರೆ.
ಪ್ರಶಾಂತ್ ಕಿಶೋರ್ ಅಲ್ಲದೆ ಒಸಾಮ ಎಂಬ ವ್ಯಕ್ತಿಯ ಮೇಲೂ ಶಾಶ್ವತ್ ಗೌತಮ್ ದೂರು ನೀಡಿದ್ದಾರೆ. ಒಸಾಮ ಎಂಬಾತ ಮೊದಲು ನನ್ನ ಜೊತೆ ಕೆಲಸ ಮಾಡುತ್ತಿದ್ದ. ಈ ವ್ಯಕ್ತಿಯೇ ಪ್ರಶಾಂತ್ ಕಿಶೋರ್ಗೆ ನನ್ನ ವಿಷಯ ನೀಡಿದ್ದಾನೆ ಎಂದು ದೂರಿದ್ದಾರೆ.
ಇತ್ತೀಚೆಗೆ ನಡೆದ 'ಬಿಹಾರ್ ಕಿ ಬಾತ್' ಕಾರ್ಯಕ್ರಮದಲ್ಲಿ, ಕಿಶೋರ್ ಅವರು ಬಿಹಾರವನ್ನು ದೇಶದ 10 ಅತ್ಯುತ್ತಮ ರಾಜ್ಯಗಳಲ್ಲಿ ಒಂದನ್ನಾಗಿ ಮಾಡುವ ಗುರಿ ಹೊಂದಿದ್ದಾರೆಂದು ಹೇಳಿಕೊಂಡಿದ್ದರು.
ಚುನಾವಣಾ ಚಾಣಕ್ಯ ಎಂದು ಕರೆಯಲ್ಪಡುತ್ತಿದ್ದ ಪ್ರಶಾಂತ್ ಕಿಶೋರ್ 2012ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, 2019 ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಸೇರಿ ಹಲವು ಚುನಾವಣೆಗಳಲ್ಲಿ ವಿವಿಧ ಪಕ್ಷದ ಪರ ಕೆಲಸ ಮಾಡಿದ್ದಾರೆ.