ಪಾಟ್ನಾ(ಬಿಹಾರ): ಇಂದು ರಾಜ್ಯದ ಮೊದಲ ಹಂತದ ಚುನಾವಣೆ ನಡೆದಿದ್ದು, ಶೇಕಡಾ 54.26ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕೋವಿಡ್ ಮಾರ್ಗಸೂಚಿ ಅನುಸರಿಸಿ 71 ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಡೆಸಲಾಯಿತು.
ಒಟ್ಟು 1,180 ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ 114 ಮಹಿಳಾ ಅಭ್ಯರ್ಥಿಗಳು 1,066 ಪುರುಷ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇಂದಿನ ಚುನಾವಣೆಯಲ್ಲಿ 2.15 ಕೋಟಿ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇದರಲ್ಲಿ 1.12 ಕೋಟಿ ಪುರುಷರು, 1.01 ಕೋಟಿ ಮಹಿಳೆಯರು ಮತ್ತು 599 ತೃತೀಯ ಲಿಂಗದವರಿದ್ದಾರೆ.
ಮೊದಲ ಹಂತದ ಎಲೆಕ್ಷನ್ನಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಸರ್ಕಾರದಲ್ಲಿ ಸಚಿವರಾಗಿರುವ ಕೃಷ್ಣನಂದನ್ ವರ್ಮ, ಪ್ರೇಮ್ ಕುಮಾರ್, ಜೈ ಕುಮಾರ್ ಸಿಂಗ್, ಸಂತೋಷ್ ಕುಮಾರ್ ನಿರಾಲ, ವಿಜಯ ಸಿನ್ಹಾ ಮತ್ತು ರಾಮ್‍ನಾರಾಯಣ್ ಮಂಡಲ್ ಭವಿಷ್ಯ ನಿರ್ಧಾರವಾಗಲಿದೆ. 71 ಕ್ಷೇತ್ರಗಳ ಪೈಕಿ ಜೆಡಿಯು 35 ಕ್ಷೇತ್ರ, ಬಿಜೆಪಿ 29 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಆರ್ಜೆಡಿ 42 ಹಾಗೂ ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಲೋಕ ಜನಶಕ್ತಿ ಪಾರ್ಟಿ 41 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು.
ಮೊದಲ ಹಂತದ ಚುನಾವಣೆ ನಡೆಯುತ್ತಿದ್ದರೆ, ಅತ್ತ ಎರಡನೇ ಹಂತದ ಚುನಾವಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎನ್‍ಡಿಎ ನೇತೃತ್ವ ಸರ್ಕಾರದ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸಿದರು.