ಪಾಟ್ನಾ:ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಿಹಾರ ರಾಜ್ಯ ತತ್ತರಿಸಿದ್ದು ಇಲ್ಲಿಯವರೆಗೆ 29 ಮಂದಿ ಸಾವಿಗೀಡಾಗಿದ್ದಾರೆ.
ಭಾರಿ ಮಳೆಗೆ ಬಿಹಾರ ರಾಜಧಾನಿ ಪಾಟ್ನಾ ಸಂಪೂರ್ಣ ಮುಳುಗಡೆಯಾಗಿದ್ದು, ರಸ್ತೆಗಳೆಲ್ಲ ನದಿಯಂತೆ ಮಾರ್ಪಟ್ಟಿವೆ. ಭಾರಿ ಪ್ರವಾಹದಿಂದ ಹಲವು ಜನ ಮನೆ ಕಳೆದುಕೊಂಡಿದ್ದು, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪ್ರಕೃತಿಯ ಮುಂದೆ ಮನುಷ್ಯ ಅಸಹಾಯಕನಾಗಿದ್ದಾನೆ. ಆದರೂ, ನಾವು ನಮ್ಮ ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.
ಪ್ರವಾಹ ಸಂತ್ರಸ್ತರ ಸ್ಥಳಾಂತರ, ಆಹಾರ ಮತ್ತು ಅಗತ್ಯ ಸಾಮಗ್ರಿಗಳನ್ನ ವಿತರಣೆ ಮಾಡಲು 2 ಸೇನಾ ಹೆಲಿಕಾಪ್ಟರ್ಗಳನ್ನ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಪ್ರವಾಹ ಸಂತ್ರಸ್ತರ ನೆರವಿಗಾಗಿ ಫೇಸ್ಬುಕ್ ತುರ್ತು ಗುಂಡಿಯನ್ನು (ಎಸ್ಒಎಸ್ ಬಟನ್) ತನ್ನ ಬಳಕೆದಾರರಿಗೆ ನೀಡಿದ್ದು, ತಾವು ಸುರಕ್ಷಿತವಾಗಿ ಯಾವ ಜಾಗದಲ್ಲಿದ್ದೀವಿ ಎಂಬುದನ್ನು ಗುರುತುಮಾಡಲು ಅವಕಾಶ ಮಾಡಿಕೊಟ್ಟಿದೆ.