ನವದೆಹಲಿ:ಲಾಕ್ ಡೌನ್ ಹಿನ್ನೆಲೆ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ (ಐಟಿ) ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ರಾಜ್ಯ ಐಟಿ ಸಚಿವರೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಭಾರತದ ಎಲೆಕ್ಟ್ರಾನಿಕ್ ಉತ್ಪಾದನಾ ವಲಯಕ್ಕೆ ಬೃಹತ್ ಅವಕಾಶಗಳು ಒದಗಿ ಬರಲಿದೆ: ರವಿಶಂಕರ್ ಪ್ರಸಾದ್ - ಸಚಿವ ರವಿಶಂಕರ್ ಪ್ರಸಾದ್
ಕೇಂದ್ರ ಐಟಿ ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್ ಮಂಗಳವಾರ ಎಲ್ಲಾ ರಾಜ್ಯಗಳ ಐಟಿ ಸಚಿವರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಶೀಘ್ರದಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನಾ ವಲಯಕ್ಕೆ ಬೃಹತ್ ಅವಕಾಶಗಳು ಒದಗಿ ಬರಲಿದೆ ಎಂದು ಈ ವೇಳೆ ಅವರು ಹೇಳಿದರು.
ಈ ವೇಳೆ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಪ್ರಮುಖ ಕಂಪನಿಗಳು ಅತೀ ಶೀಘ್ರದಲ್ಲಿ ಭಾರತದತ್ತ ಬರಲಿದೆ. ಚೀನಾದ ಸ್ಥಿತಿಯಿಂದಾಗಿ ಹೂಡಿಕೆದಾರರು ಚೀನಾ ವಿರುದ್ಧ ಅಸಮಧಾನಗೊಂಡಿದ್ದಾರೆ. ಹೀಗಾಗಿ, ಹಲವು ಕಂಪನಿಗಳು ಭಾರತದತ್ತ ಬರುವ ಸಂಭವವಿದೆ. ಅವುಗಳನ್ನು ಪ್ರೋತ್ಸಾಹಿಸುವಲ್ಲಿ ರಾಜ್ಯಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಅಲ್ಲದೆ, ಈಗಾಗಲೇ ಚಾಲ್ತಿಯಲ್ಲಿರುವ ಏ.30ಕ್ಕೆ ಕೊನೆಗೊಳ್ಳಬೇಕಿದ್ದ ವಿವಿಧ ಸಂಸ್ಥೆಗಳ ವರ್ಕ್ ಫ್ರಂ ಹೋಂ ವ್ಯವಸ್ಥೆಯನ್ನು ಜುಲೈ 31ರವರೆಗೆ ವಿಸ್ತರಿಸಲು ಸೂಚಿಸಲಾಗಿದೆ ಎಂದರು.
ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವುದನ್ನು ಸಚಿವಾಲಯ ನಿರಂತರ ಗಮನಿಸುತ್ತಿದೆ ಎಂದ ಸಚಿವರು, ಆರೋಗ್ಯ ಸೇತು ಆ್ಯಪ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೆ ಆರೋಗ್ಯ ಸೇತು ಆ್ಯಪ್ ಈಗಾಗಲೇ 50 ಮಿಲಿಯನ್ ಡೌನ್ಲೋಡ್ ಆಗಿದೆ ಎಂದರು.