ನವದೆಹಲಿ: ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿರುವ ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಇಬ್ಬರೂ ಈ ವರ್ಷದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ, ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದ 2015 ರ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮರು ಪ್ರವೇಶಿಸುವುದನ್ನು ಜಗತ್ತು ನೋಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಇಬ್ಬರೂ ಹವಾಮಾನ ಮತ್ತು ಪರಿಸರ ನ್ಯಾಯದ ಬಲವಾದ ಪ್ರತಿಪಾದಕರಾಗಿದ್ದಾರೆ. ಹೀಗಾಗಿ, ಈ ಇಬ್ಬರೂ ವಿಜಯ ಪತಾಕೆ ಹಾರಿಸಿದರೆ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮರಳುವ ಸಾಧ್ಯತೆ ನಿಚ್ಚಳವಾಗಿದೆ. ಜೊತೆಗೆ ಈ ಹವಾಮಾನ ಒಪ್ಪಂದದಲ್ಲಿ ಭಾರತೀಯರು ಪ್ರಮುಖ ಪಾತ್ರ ವಹಿಸಿದ್ದಾರೆ.
ಡೆಮಾಕ್ರಟ್ ಪಕ್ಷದ ಅಧ್ಯಕ್ಷೀಯ ನಾಮ ನಿರ್ದೇಶಿತ ಜೋ ಬಿಡೆನ್ ಅವರ ಸಹ ಸ್ಪರ್ಧಿಯಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕ್ಯಾಲಿಫೋರ್ನಿಯಾದ ಅಮೆರಿಕ ಸೆನೆಟರ್ ಆಗಿರುವ ಹ್ಯಾರಿಸ್, ಈ ತಿಂಗಳ ಆರಂಭದಲ್ಲಿ ನ್ಯೂಯಾರ್ಕ್ ನ ಅಮೆರಿಕ ಪ್ರತಿನಿಧಿಗಳಾದ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಅವರ ಜೊತೆ ಹವಾಮಾನ ಇಕ್ವಿಟಿ ಆಕ್ಟ್ (Climate Equity Act (CEA) ಅನ್ನು ಪರಿಚಯಿಸಿದರು.
"ಹವಾಮಾನ ಅಥವಾ ಪರಿಸರ ಸಂಬಂಧದೊಂದಿಗೆ ನೀತಿ, ನಿಯಂತ್ರಣ, ಅಥವಾ ನಿಯಮವನ್ನು ಪರಿಗಣಿಸಿದಾಗಲೆಲ್ಲಾ ಮುಂಚೂಣಿ ಸಮುದಾಯಗಳು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಹೃದಯಭಾಗದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬೇಕು - ಇದು ಪರಿಸರ ಮತ್ತು ಹವಾಮಾನ ಬದಲಾವಣೆ ಕುರಿತ ಸಮಸ್ಯೆ ಪರಿಹರಿಸಲು ನೇರ ನೀತಿಗಳನ್ನು ವ್ಯಾಪಕವಾಗಿ ಒಳಗೊಂಡಿರಬಹುದು. ಜೊತೆಗೆ ಸಾರಿಗೆ, ವಸತಿ, ಮೂಲಸೌಕರ್ಯ, ಉದ್ಯೋಗಗಳು, ಉದ್ಯೋಗಿಗಳ ಅಭಿವೃದ್ಧಿ ಮತ್ತು ಇನ್ನಷ್ಟು” ನೀತಿ ನಿರೂಪಣೆಯಲ್ಲಿ ಜನರ ಪಾತ್ರ ಇರಬೇಕೆಂದು ಎಂದು ಸಿಇಎ ಕರಡು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದು 2015ರ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹೊರಬರಲು ಮತ್ತು ಒಪ್ಪಂದವನ್ನು ಪುನಃ ಪ್ರವೇಶಿಸಲು ಅಮೆರಿಕ, ಅಮೆರಿಕದ ಉದ್ಯಮ, ಅಮೆರಿಕದ ಉದ್ಯೋಗಿಗಳು ಮತ್ತು ಆ ದೇಶದ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ಒಪ್ಪಂದದ ನಿಯಮಾವಳಿ ತಿದ್ದುಪಡಿ ಮಾಡಲು ಅಥವಾ ಹೊಸ ಒಪ್ಪಂದ ಮಾಡಿಕೊಳ್ಳಲು 2017ರಲ್ಲಿ ಡೊನಾಲ್ಡ್ ಟ್ರಂಪ್ ಆರಂಭಿಸಿದ ಸಂಧಾನ ಮಾತುಕತೆಗೆ ನೇರ ವಿರೋಧಾಭಾಸವಾಗಿದೆ. ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುವಾಗ, ಪ್ಯಾರಿಸ್ ಒಪ್ಪಂದವು ಅಮೆರಿಕ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ತಮ್ಮ ದೇಶವನ್ನು“ಶಾಶ್ವತ ಅನಾನುಕೂಲ”ಕ್ಕೆ ತಳ್ಳುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಒಪ್ಪಂದದಿಂದ ಹೊರ ಬರುವ ನಿರ್ಧಾರವು ಅಮೆರಿಕದ ಮೊದಲ ನೀತಿಗೆ ಅನುಗುಣವಾಗಿರುತ್ತದೆ ಎಂದು ಅವರು ಹೇಳಿದ್ದರು.
2015ರಲ್ಲಿ ಪಕ್ಷಗಳ ಸಮ್ಮೇಳನದ (ಕೋಪ್) ನಂತರ ಸಹಿ ಹಾಕಿದ ಅಭೂತಪೂರ್ವ ಪ್ಯಾರಿಸ್ ಹವಾಮಾನ ಒಪ್ಪಂದದ ಪ್ರಕಾರ, 2020ರಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತಮ್ಮ ಹವಾಮಾನ ಬದ್ಧತೆಗಳನ್ನು ಪೂರೈಸಲು ಅಥವಾ ಯೋಜಿಸಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ವಾರ್ಷಿಕವಾಗಿ ಕನಿಷ್ಠ 100 ಬಿಲಿಯನ್ ಹರಿವನ್ನು ಖಾತ್ರಿಪಡಿಸಿಕೊಳ್ಳಬೇಕು ಅಥವಾ ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಫ್ರೇಮ್ವರ್ಕ್ ಕನ್ವೆನ್ಷನ್ಗೆ (ಯುಎನ್ಎಫ್ಸಿಸಿ) ಸಲ್ಲಿಸಿದ ಅವರ ರಾಷ್ಟ್ರೀಯ ನಿರ್ಧಾರಿತ ಕೊಡುಗೆಗಳು (ಎನ್ಡಿಸಿಗಳು)ಗೆ ಬದ್ಧವಾಗಿರಬೇಕು.
ಒಪ್ಪಂದದ ಪ್ರಕಾರ, ಜಾಗತಿಕ ತಾಪಮಾನ ಹೆಚ್ಚಳವನ್ನು 2 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇಡಲಾಗುವುದು ಮತ್ತು ಒಪ್ಪಂದಕ್ಕೆ ಬಂದ ದೇಶಗಳು ತಾಪಮಾನ ಏರಿಕೆಯನ್ನ 1.5 ಡಿಗ್ರಿ ಸೆಲ್ಸಿಯಸ್ ಗೆ ತಡೆ ಹಿಡಿಯುವ ಪ್ರಯತ್ನಗಳನ್ನು ಮಾಡುತ್ತವೆ.
ಒಪ್ಪಂದದ ಪ್ರಕಾರ, ಭಾರತವು ಮೂರು ಪ್ರಮುಖ ಬದ್ಧತೆಗಳನ್ನು ಮಾಡಿದೆ: 2030 ರ ವೇಳೆಗೆ ಅದರ ಶೇಕಡಾ 40 ರಷ್ಟು ವಿದ್ಯುತ್ ಪಳಿಯುಳಿಕೆ ರಹಿತ ಮೂಲಗಳಿಂದ ಉತ್ಪತ್ತಿಯಾಗುವುದನ್ನು ಖಾತ್ರಿಪಡಿಸುವುದು; 2030 ರ ವೇಳೆಗೆ ಅದರ ಜಿಡಿಪಿಯ ಹಸಿರುಮನೆ ಅನಿಲ ಹೊರಸೂಸುವಿಕೆಯ ತೀವ್ರತೆಯನ್ನು 2005 ರ ಮಟ್ಟಕ್ಕಿಂತ ಶೇಕಡಾ 33-35 ರಷ್ಟು ಕಡಿಮೆಗೊಳಿಸುವುದು; ಮತ್ತು ಇದು 2030 ರ ವೇಳೆಗೆ ಹೆಚ್ಚುವರಿ ಅರಣ್ಯ ಮತ್ತು ಮರಗಳ ಹೊದಿಕೆಯ ಮೂಲಕ 2.5 ರಿಂದ 3 ಬಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಸಮಾನವಾದ ಹೆಚ್ಚುವರಿ ‘ಕಾರ್ಬನ್ ಸಿಂಕ್’ ಅನ್ನು ರಚಿಸುತ್ತದೆ.
2015 ರಲ್ಲಿ ಕೋಪ್(Cop) ಅವಧಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ, ಆಗಿನ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲೆಂಡ್ ಅವರೊಂದಿಗೆ, ಸೌರ ಸಂಪನ್ಮೂಲ-ಸಮೃದ್ಧ ರಾಷ್ಟ್ರಗಳ ಒಕ್ಕೂಟವಾದ ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು (ISA) ಪ್ರಾರಂಭಿಸಿದರು. ಅವರ ವಿಶೇಷ ಇಂಧನ ಅಗತ್ಯಗಳನ್ನು ಪರಿಹರಿಸಲು ಮತ್ತು ವೇದಿಕೆಯನ್ನು ಒದಗಿಸಲು ಗುರುತಿಸಲಾದ ಅಂತರವನ್ನು ಸಾಮಾನ್ಯ, ಒಪ್ಪಿದ ವಿಧಾನದ ಮೂಲಕ ನಿಭಾಯಿಸಲು ಸಹಕರಿಸಲು ನಿರ್ಧರಿಸಲಾಯಿತು. ಉಷ್ಣವಲಯದ ಉತ್ತರ ಅಕ್ಷಾಂಶ ಮತ್ತು ದಕ್ಷಿಣ ಅಕ್ಷಾಂಶ ನಡುವೆ ಬರುವ ಎಲ್ಲಾ 121 ನಿರೀಕ್ಷಿತ ಸದಸ್ಯ ರಾಷ್ಟ್ರಗಳಿಗೆ ಐಎಸ್ಎ ಮುಕ್ತವಾಗಿದೆ.
ಐಎಸ್ಎಯ ಪ್ರಧಾನ ಕಚೇರಿ ಭಾರತದ ಗುರುಗ್ರಾಮದಲ್ಲಿದೆ. ಜೊತೆಗೆ 2016-17 ರಿಂದ 2020-21ರವರೆಗಿನ ಐದು ವರ್ಷಗಳಲ್ಲಿ ಕಾರ್ಪಸ್ ರಚಿಸುವುದು, ಮೂಲಸೌಕರ್ಯಗಳನ್ನು ನಿರ್ಮಿಸುವುದು ಮತ್ತು ಪುನರಾವರ್ತಿತ ವೆಚ್ಚಗಳಿಗಾಗಿ ಮೈತ್ರಿಕೂಟಕ್ಕೆ 125 ಕೋಟಿ ರೂ.ಗಳ ಬೆಂಬಲವನ್ನು ನೀಡಲು ನವದೆಹಲಿ ಬದ್ಧವಾಗಿದೆ.
ತನ್ನ ಸೌರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಭಾರತದ ಪ್ರಯತ್ನಗಳು ಕೋವಿಡ್-19 ಸಾಂಕ್ರಾಮಿಕದಿಂದ ಪ್ರಭಾವಿತವಾಗಿದ್ದರೂ, ಜೂನ್ 30, 2020 ರ ಹೊತ್ತಿಗೆ ಅದರ ಸ್ಥಾಪಿತ ಸಾಮರ್ಥ್ಯವು 35 GW ಗಿಂತ ಹೆಚ್ಚಾಗಿದೆ.
ಈಗ, ಕಮಲಾ ಹ್ಯಾರಿಸ್ CEA ಅನ್ನು ಪರಿಚಯಿಸುವುದರೊಂದಿಗೆ, ನವದೆಹಲಿಗೆ ಒಳ್ಳೆಯ ಸುದ್ದಿಯಾಗಿರುವ ಬಿಡೆನ್ ಚುನಾವಣೆಯಲ್ಲಿ ಗೆದ್ದರೆ ಅವರು ಪ್ಯಾರಿಸ್ ಒಪ್ಪಂದಕ್ಕೆ ಮತ್ತೆ ಸೇರ್ಪಡೆಗೊಳ್ಳಲು ಅಮೆರಿಕ ದೇಶವನ್ನು ಮುನ್ನಡೆಸಬಹುದು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.