ಉತ್ತರಾಖಂಡ: ಪಾತಾಳ ಭುವನೇಶ್ವರ ಗುಹೆ ಒಂದು ಅದ್ಭುತ ಹಾಗೂ ವಿಸ್ಮಯಕಾರಿಯೂ ಹೌದು. ಈ ಗುಹೆ ಇಂದಿಗೂ ಪ್ರಶ್ನೆಗಳ ಮೂಟೆ, ಕೌತುಕದ ಕಣಜ. ಇಲ್ಲಿ ಶಿವ ಕತ್ತರಿಸಿದ ವಿನಾಯಕ ಶಿರವಿದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಒಂದು ದಿನ ಪಾರ್ವತಿಯು ಸ್ನಾನಕ್ಕೆ ತೆರಳುವಾಗ ಯಾರೇ ಬಂದರೂ, ಸ್ನಾನ ಗೃಹ ಪ್ರವೇಶಿಸಲು ಬಿಡಬೇಡ ಎಂದು ಹೇಳಿ ಸ್ನಾನಕ್ಕೆ ತೆರಳುತ್ತಾಳೆ. ತನ್ನ ತಾಯಿಯ ಆಜ್ಞೆಯನ್ನು ಗಣೇಶ ಶಿರಸಾವಹಿಸಿ ಪಾಲಿಸುತ್ತಿರುವಾಗ, ಮಹಾ ಶಿವ ಬಂದ ಒಳ ಪ್ರವೇಶ ಮಾಡಲು ಬಿಡು ಎಂದು ಹೇಳುತ್ತಾರೆ. ಆಗ ಗಣೇಶ, ಒಳ ಬಿಡಲು ನಿರಾಕರಿಸಿದಾಗ ಕೋಪಗೊಂಡ ಶಿವ, ಗಣೇಶನ ಶಿರಚ್ಛೇದನ ಮಾಡುತ್ತಾನೆ. ಗಣಪತಿಯ ಶಿರವು ಪಾತಾಳ ಭುವನೇಶ್ವರ ಗುಹಾಲಯದಲ್ಲಿದೆ ಎಂಬ ನಂಬಿಕೆಯಿದೆ.
ಇಲ್ಲಿದೆ ಶಿವನು ಕತ್ತರಿಸಿದ ವಿನಾಯಕನ ಶಿರ ಉತ್ತರಾಖಂಡದ ಪಿತೋರ್ಘರ್ ಜಿಲ್ಲೆಯ ಗಂಗೋಲಿಹತ್‌ನಿಂದ 14 ಕಿ.ಮೀ ದೂರದಲ್ಲಿ ಈ ಪಾತಾಳ ಭುವನೇಶ್ವರ ಗುಹೆಯಿದ್ದು, ಸಮುದ್ರ ಮಟ್ಟದಿಂದ 1,350 ಮೀಟರ್ ಎತ್ತರದಲ್ಲಿದೆ. ಈ ಗುಹೆಯೊಳಗೆ ಇಳಿದರೆ ಅದ್ಭುತ ಲೋಕವೊಂದು ತೆರೆದುಕೊಳ್ಳುತ್ತದೆ. ಬಲು ಪುರಾತನ ಗುಹೆ ಇದಾಗಿದ್ದು, ಇಲ್ಲಿ ಅಧ್ಯಾತ್ಮದ ಸೆಳೆತವಿದೆ. ಅಚ್ಚರಿ ಮೂಡಿಸುವ ದೇವರ ರೂಪಗಳು ಕಣ್ಣಿಗೆ ಕಾಣ ಸಿಗುತ್ತವೆ.
ಇಲ್ಲಿ ಗಣೇಶನ ತಲೆಯು ಬಂಡೆಯ ಆಕಾರದಲ್ಲಿದೆ. ಅದರ ಮೇಲೆ 108 ದಳಗಳ ಬ್ರಹ್ಮ ಕಮಲವನ್ನು ಚಿತ್ರಿಸುವ ಮತ್ತೊಂದು ಬಂಡೆಯಿದೆ. ಅದರಿಂದ ಗಣೇಶನ ತಲೆಯ ಮೇಲೆ ಮಕರಂದದ ಹನಿ ಬೀಳುತ್ತದೆ. ಅದರಲ್ಲಿ ಪವಿತ್ರವಾದ ಹನಿಯು ಗಣೇಶನ ಬಾಯಲ್ಲಿ ಬೀಳುತ್ತದೆ. ಶಿವನು ಅಲ್ಲಿ ಬ್ರಹ್ಮಕಮಲವನ್ನು ಪ್ರತಿಷ್ಠಾಪಿಸಿದ್ದಾನೆ ಎಂದು ನಂಬಲಾಗಿದೆ.
ಇನ್ನು ಶಿವ ಇದೇ ಗುಹೆಯಲ್ಲಿ ವಾಸ ಮಾಡುತ್ತಿದ್ದು, ಎಲ್ಲ ದೇವರುಗಳು ಆತನನ್ನು ಆರಾಧಿಸಲು ಈ ಗುಹೆಗೆ ಬರುತ್ತಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ದ್ವಾಪರ ಯುಗದಲ್ಲಿ ಮಹಾಭಾರತ ಯುದ್ಧದ ನಂತರ ಇಲ್ಲಿಗೆ ಬಂದು ತಪಸ್ಸು ಮಾಡಿದ್ದಾರೆ ಎಂಬ ಉಲ್ಲೇಖವಿದೆ.
ಜಗದ್ಗುರು ಶಂಕರಾಚಾರ್ಯರು ಕ್ರಿ.ಶ 722 ರ ಸುಮಾರಿಗೆ ಈ ಗುಹೆಗೆ ಭೇಟಿ ನೀಡಿದಾಗ, ಅಲ್ಲಿನ ಶಿವಲಿಂಗವನ್ನು ತಾಮ್ರದಿಂದ ಮುಚ್ಚಿದ್ದರು ಎಂದು ಹೇಳಲಾಗುತ್ತದೆ. ಇನ್ನು ಗುಹಾಲಯದಲ್ಲಿ ನಾಲ್ಕು ಯುಗಗಳ ಪ್ರತೀಕವಾಗಿರುವ ಶಿಲೆಯೊಂದು ಇದೆ. ಅದರಲ್ಲಿ ಒಂದು ಕಲಿಯುಗದ ಪ್ರತೀಕ ಎಂದು ಹೇಳಲಾಗುತ್ತದೆ. ಅದು ಕ್ರಮೇಣ ಮೇಲೇಳುತ್ತಿದೆಯಂತೆ. ಯಾವಾಗ ಈ ಕಲ್ಲು ಗೋಡೆಗೆ ಬಡಿಯುತ್ತೋ ಅಂದು ಕಲಿಯುಗದ ಅಂತ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ.
ಈ ಗುಹೆಯಿಂದ ಕೇದಾರನಾಥ, ಬದ್ರಿನಾಥ್ ಮತ್ತು ಅಮರನಾಥ ದೇವರ ದರ್ಶನ ಪಡೆಯಬಹುದು. ಗುಹೆಯಲ್ಲಿ ನಕ್ಷತ್ರ ನಾಗ ಆಕಾರದಲ್ಲಿ ಬಂಡೆಯೊಂದಿದೆ ಹಾಗೂ ಕಾಲಭೈರವನ ನಾಲಿಗೆಯನ್ನು ಇಲ್ಲಿ ನೋಡಬಹುದು.
ಗುಹೆಯ ಪ್ರವೇಶ ದ್ವಾರದಲ್ಲಿ ಭಗವಾನ್ ನರಸಿಂಹನನ್ನು ನೋಡಬಹುದು. ಇನ್ನೂ ಸ್ವಲ್ಪ ಕೆಳಗೆ ಹೋದರೆ ಶೇಷ ನಾಗನ ಹೆಡೆಯಾಕಾರದಲ್ಲಿ ಒಂದು ಕಲ್ಲು ಇದೆ. ಮತ್ತಷ್ಟು ಕೆಳಗೆ ಕಾಮಧೇನು ಹಸುವಿನ ಕೆಚ್ಚಲುಗಳ ಆಕಾರದಲ್ಲಿ ಒಂದು ಬಂಡೆ ಇದೆ. ದೇವರ ಕಾಲದಲ್ಲಿ ಈ ಕೆಚ್ಚಲುಗಳಿಂದ ಹಾಲು ಹರಿಯುತ್ತಿತ್ತು. ಇಂದು ಅಲ್ಲಿ ನೀರು ಹರಿಯುತ್ತದೆ.
ಒಟ್ಟಾರೆ ಹೇಳುವುದಾದರೆ ಇದು ನೈಸರ್ಗಿಕವಾಗಿ ನಿರ್ಮಾಣವಾದಂತಹ ದೇವಾಲಯವಾಗಿದ್ದು, ಗಣೇಶನನ್ನು ಆರಾಧಿಸಲು ಸಾಲು ಸಾಲಾಗಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.