ನವದೆಹಲಿ: ರಕ್ಕಸ ಚಂಡಮಾರುತ ಫಣಿ ವಿವಿಧೆಡೆ ಅಪ್ಪಳಿಸಿ ಜನ ಜೀವನವನ್ನು ಮೂರಾಬಟ್ಟೆ ಮಾಡಿದೆ. ಅನೇಕರ ಜೀವವನ್ನೂ ಬಲಿಪಡೆದಿದೆ. ಚಂಡಮಾರುತದ ವ್ಯತಿರಿಕ್ತ ಪರಿಣಾಮವನ್ನು ನಾಸಾ ಸ್ಯಾಟಲೈಟ್ ಚಿತ್ರಗಳ ಮೂಲಕ ವಿವರಿಸಿದೆ.
ನಾಸಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಒಡಿಶಾದ ಭುವನೇಶ್ವರದ ಎರಡು ಸ್ಯಾಟಲೈಟ್ ಫೋಟೋಗಳನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಏಪ್ರಿಲ್ 30, ಫಣಿ ಅಪ್ಪಳಿಸುವ ಮುನ್ನ ಹಾಗೂ ಮೇ 5 ಫಣಿ ಅಪ್ಪಳಿಸದ ನಂತರದ ಫೋಟೋಗಳಿವೆ.
ಮೊದಲ ಫೋಟೋದಲ್ಲಿ ರಾತ್ರಿ ವೇಳೆ ಭುವನೇಶ್ವರದೆಲ್ಲೆಡೆ ವಿಸ್ತಾರವಾಗಿ ಹರಡಿದ ವಿದ್ಯುತ್ ಬೆಳಕನ್ನು ಕಾಣಬಹುದು. ಎರಡನೆ ಫೋಟೋದಲ್ಲಿ ಬೆಳಕಿನ ಕೆಲವೆಡೆ ಮಾತ್ರ ಇದೆ. ಇದು ಫಣಿ ಚಂಡಮಾರುತದಿಂದ ಹಲವೆಡೆ ಭೂಕುಸಿತ ಉಂಟಾಗಿ, ಟ್ರಾನ್ಸ್ಮಿಷನ್ ಟವರ್ಗಳು ಧ್ವಂಸವಾಗಿದ್ದನ್ನು, 1,56,000 ವಿದ್ಯುತ್ ಕಂಬಗಳನ್ನು ಬುಡಮೇಲು ಮಾಡಿದ್ದನ್ನು ಸೂಚಿಸುತ್ತಿದೆ.
ಫಣಿ ಅಪ್ಪಳಿಸಿದಾಗಿನಿಂದ ಈ ಭಾಗಗಳಲ್ಲಿ ವಿದ್ಯುತ್ ಇಲ್ಲವಾಗಿದ್ದು, ಮೇ 12ಕ್ಕೆ ವಿದ್ಯುತ್ ಪೂರೈಕ ಸಹಜ ಸ್ಥಿತಿಗೆ ಬರಲಿದೆ ಎಂದು ಒಡಿಶಾ ಸರ್ಕಾರ ಹೇಳಿದೆ. ಇದಕ್ಕಾಗಿ ಕೇಂದ್ರದ ನೆರವನ್ನೂ ಕೋರಿದೆ.