ನವದೆಹಲಿ: ಭೋಪಾಲ್ ರೈಲು ನಿಲ್ದಾಣದಲ್ಲಿ ಆಹಾರಕ್ಕಾಗಿ ಅಳುತ್ತಿದ್ದ 6 ತಿಂಗಳ ಶಿಶುವಿಗೆ ಆಹಾರ ನೀಡಿದ್ದಕ್ಕಾಗಿ ಸಿಆರ್ಪಿಎಫ್ ಅಧಿಕಾರಿ ಇಂದರ್ ಯಾದವ್ ಅವರನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಶ್ಲಾಘಿಸಿದ್ದಾರೆ.
ಚಲಿಸುತ್ತಿದ್ದ ರೈಲಿನ ಹಿಂದೆ ಓಡಿ, ಮಗುವಿಗೆ ಆಹಾರ ಒದಗಿಸಿದ ಸಿಆರ್ಪಿಎಫ್ ಅಧಿಕಾರಿ: ಗೋಯಲ್ ಶ್ಲಾಘನೆ - ರೈಲಿನ ಹಿಂದೆ ಓಡಿ, ಮಗುವಿಗೆ ಆಹಾರ
ಭೋಪಾಲ್ ರೈಲ್ವೆ ನಿಲ್ದಾಣದಲ್ಲಿನ ಶ್ರಮಿಕ್ ರೈಲಿನಲ್ಲಿ ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಹಾಲಿನ ಪ್ಯಾಕೆಟ್ ನೀಡುವ ಮೂಲಕ ಹಸಿವು ನೀಗಿಸಿದ ಸಿಆರ್ಪಿಎಫ್ ಅಧಿಕಾರಿಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅಭಿನಂದನೆ ಸಲ್ಲಿಸಿದ್ದಾರೆ.
ಭೋಪಾಲ್ ರೈಲು ನಿಲ್ದಾಣದಲ್ಲಿ ಬಂದು ನಿಂತಿದ್ದ ಶ್ರಮಿಕ್ ರೈಲಿನಲ್ಲಿ 6 ತಿಂಗಳ ಮಗುವೊಂದು ಹಸಿವಿನಿಂದ ಅಳುತ್ತಿತ್ತು. ಈ ವೇಳೆ, ಆಕೆಯ ತಾಯಿ ಸಫಿಯಾ ಹಾಶಿಮಾ ಎಂಬುವವವರು ಸಿಆರ್ಪಿಎಫ್ ಅಧಿಕಾರಿ ಇಂದರ್ ಯಾದವ್ ಅವರ ಬಳಿ ಸಹಾಯ ಕೇಳಿದ್ದಾರೆ. ಮಗುವಿನ ಹಸಿವು ನೀಗಿಸುವ ಸಲುವಾಗಿ ಇಂದರ್, ರೈಲು ನಿಲ್ದಾಣದ ಬಳಿ ಇರುವ ಅಂಗಡಿಗೆ ತೆರಳಿ ಹಾಲಿನ ಪ್ಯಾಕೆಟ್ ಖರೀದಿಸಿ ಬರುವ ವೇಳೆಗೆ ರೈಲು ಹೊರಟಿತ್ತು. ಇದನ್ನು ನೋಡಿದ ಇಂದರ್, ಕೂಡಲೆ ರೈಲಿನ ಹಿಂದೆ ಓಡಲು ಪ್ರಾರಂಭಿಸಿ ರೈಲಿನ ಕಿಟಕಿಯ ಮೂಲಕ ಸಫಿಯಾಗೆ ಹಾಲಿನ ಪ್ಯಾಕೆಟ್ ನೀಡಿದ್ದರು.
ಈ ಎಲ್ಲ ದೃಶ್ಯಗಳು ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಇನ್ನು ಈ ಬಗ್ಗೆ ತಿಳಿದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಹ ಸಂತಸ ವ್ಯಕ್ತಪಡಿಸಿದ್ದು, ಸಿಆರ್ಪಿಎಫ್ ಅಧಿಕಾರಿ ಇಂದರ್ ಯಾದವ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.