ಭೋಪಾಲ್(ಮಧ್ಯಪ್ರದೇಶ):ಕಳೆದ ಎರಡು ದಿನಗಳ ಹಿಂದೆ ತೆರೆದ ಕೊಳವೆ ಬಾವಿಯಲ್ಲಿ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇದರ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಇದೀಗ ಮತ್ತೊಂದು ಆಘಾತಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಬರ್ಖೇಡಿ ಗ್ರಾಮದಲ್ಲಿ ಮಣ್ಣಿನ ದಿಬ್ಬ ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಮೃತ ಮಕ್ಕಳ ಕುಟುಂಬಕ್ಕೆ ಈಗಾಗಲೇ 4 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದ್ದು, ಎಲ್ಲರೂ 7 - 9 ವರ್ಷದೊಳಗಿನವರು ಎಂದು ವರದಿಯಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಒಂದೇ ಹಳ್ಳಿಯ ಏಳು ಮಕ್ಕಳು ಕಾಲುವೆ ಬಳಿ ಮಣ್ಣು ಅಗೆಯುತ್ತಿದ್ದಾಗ ಏಕಾಏಕಿ ದಿಬ್ಬ ಕುಸಿದು ಈ ದುರ್ಘಟನೆ ನಡೆದಿದೆ. ನಾಲ್ವರು ಅದರೊಳಗೆ ಸಿಲುಕಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಆದರೆ, ಮತ್ತೊಬ್ಬ ಬಾಲಕ ಅದರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಅದೇ ಬಾಲಕ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ.
ಸ್ಥಳದಲ್ಲಿ ರಕ್ಷಣೆ ಕಾರ್ಯಾಚರಣೆ ನಡೆಸಿರುವ ಸ್ಥಳೀಯರು ಇಬ್ಬರ ರಕ್ಷಣೆ ಮಾಡಿದ್ದಾರೆ. ಉಳಿದಂತೆ ಮೃತ ಬಾಲಕರ ಶವಗಳನ್ನ ಮರಣೋತ್ತರ ಪರೀಕ್ಷೆಗೋಸ್ಕರ ರವಾನೆ ಮಾಡಿದ್ದಾರೆ. ಗಾಯಗೊಂಡಿರುವ ಇಬ್ಬರು ಮಕ್ಕಳನ್ನ ಭೋಪಾಲ್ನ ಹಮಿದೈ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.