ನವದೆಹಲಿ: ಎರಡು ಕಾರಣಗಳಿಗೆ ಭಾರತಕ್ಕೆ ಬಹು ಮುಖ್ಯವಾದ ಈ ದಿನವನ್ನು ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಿಎಂ ಮೋದಿ, "ಸೆಪ್ಟೆಂಬರ್ 11 ಭಾರತಕ್ಕೆ ಎರಡು ಪ್ರಮುಖ ಮೈಲಿಗಲ್ಲುಗಳು. ಒಂದು ಆಚಾರ್ಯ ವಿನೋಬಾ ಭಾವೆ ಅವರ 125ನೇ ಜನ್ಮ ದಿನಾಚರಣೆ. ಇನ್ನೊಂದು ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಪ್ರಸಿದ್ಧ ಭಾಷಣ ಮಾಡಿದ ದಿನವಿದು. ಮಾನವೀಯತೆಯನ್ನು ಕಲಿಸುವಂತಹ ಸಾಕಷ್ಟು ವಿಚಾರಗಳು ಈ ಮಹಾಪುರುಷರಲ್ಲಿದೆ" ಎಂದು ಹೇಳಿದ್ದಾರೆ.
"ಅಮೆರಿಕಾದಲ್ಲಿ ಈ ದಿನದಂದು ನಡೆದ ಭೀಕರ ಭಯೋತ್ಪಾದಕ ದಾಳಿಗೆ ವಿಶ್ವವು 9/11 (ಸೆ. 11) ಅನ್ನು ನೆನಪಿಸಿಕೊಳ್ಳುತ್ತದೆ. ಭಾವೆ ಅವರ 'ಜೈ ಜಗತ್' ಘೋಷವಾಕ್ಯ ಹಾಗೂ ವಿವೇಕಾನಂದರ 19ನೇ ಶತಮಾನದ 'ಸಾರ್ವತ್ರಿಕ ಭ್ರಾತೃತ್ವ' ಸಂದೇಶದ ಮಾರ್ಗದಲ್ಲಿ ಜನರು ಸಾಗಿದ್ದರೆ ಅಂದು ಅಂತಹ ವಿನಾಶ ಸಂಭವಿಸುತ್ತಿರಲಿಲ್ಲ" ಎಂದು ಮತ್ತೊಂದು ಟ್ವೀಟ್ನಲ್ಲಿ ಮೋದಿ ಹೇಳಿದ್ದಾರೆ.
"ಯಾವ ಪದಗಳಲ್ಲಿ ನಿಮ್ಮನ್ನು ಹೊಗಳಬೇಕೆಂದು ನನಗೆ ತಿಳಿದಿಲ್ಲ. ನಿಮ್ಮ ಪ್ರೀತಿ-ಪಾತ್ರ ನನ್ನನ್ನು ಆಕರ್ಷಿಸುತ್ತದೆ. ನಿಮ್ಮ ಮೌಲ್ಯವನ್ನು ಅಳೆಯಲು ನಾನು ಯೋಗ್ಯನಲ್ಲ" ಎಂದು 1918ರಲ್ಲಿ ಮಹಾತ್ಮ ಗಾಂಧಿಯವರು ಭಾವೆ ಬಗ್ಗೆ ಬರೆದಿದ್ದಾರೆ. 1893ರಲ್ಲಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣವು ನಮ್ಮ ಭೂಮಿಯ ಅವಿಭಾಜ್ಯ ಅಂಗವಾಗಿರುವ ಭಾರತದ ನೈತಿಕತೆ ಮತ್ತು ಮೌಲ್ಯಗಳನ್ನು ಸಂಪೂರ್ಣವಾಗಿ ಪ್ರದರ್ಶಿಸುತ್ತದೆ. ಯುವಕರು ಅವರ ಭಾಷಣವನ್ನು ಓದಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ.