ಹೈದರಾಬಾದ್: ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಇತ್ತೀಚೆಗಷ್ಟೇ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಹೊಸ ವ್ಯಾಕ್ಸಿನ್ ತಯಾರಿಕೆಗೆ ಕಂಪನಿ ಮುಂದಾಗಿದೆ. ಇಂಟ್ರಾ ನಾಸಲ್ (ಮೂಗಿನ) ಮೂಲಕ ಲಸಿಕೆ ಹಾಕುವ ಕ್ಲಿನಿಕಲ್ ಪ್ರಯೋಗವನ್ನು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗುವುದು ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.
ಅಮೆರಿಕಾ ಹಾಗೂ ಭಾರತದಲ್ಲಿ ಇಂಟ್ರಾ ನಾಸಲ್ ಲಸಿಕೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗಿದೆ. ಮೊದಲ ಹಂತದ ಮಾನವ ಕ್ಲಿನಿಕಲ್ ಪ್ರಯೋಗಗಳು ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಭಾರತದಲ್ಲಿ ಆರಂಭಗೊಳ್ಳಲಿವೆ ಎಂದು ತಜ್ಞರು ತಿಳಿಸಿದ್ದಾರೆ. ಯುಎಸ್ಎ, ಜಪಾನ್ ಮತ್ತು ಯುರೋಪ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಲಸಿಕೆ ವಿತರಿಸುವ ಹಕ್ಕನ್ನು ಭಾರತ್ ಬಯೋಟೆಕ್ ಹೊಂದಿದೆ.
ಅಸ್ತಿತ್ವದಲ್ಲಿರುವ ಲಸಿಕೆಗಳ ವಿತರಣೆಗೆ ಇಂಟ್ರಾಮಸ್ಕುಲರ್ (ತೋಳಿಗೆ ನೀಡುವ ಇಂಜೆಕ್ಷನ್) ಚುಚ್ಚುಮದ್ದು ಅವಶ್ಯಕವಿರುವುದರಿಂದ ಕಂಪನಿಯು ಇಂಟ್ರಾ ನಾಸಲ್ ಲಸಿಕೆಯತ್ತ ಗಮನ ಹರಿಸುತ್ತಿದೆ. ಚುಚ್ಚುಮದ್ದು ಮೂಲಕ ಲಸಿಕೆ ನೀಡಲು ಭಾರತದಂತಹ ಬೃಹತ್ ರಾಷ್ಟ್ರಕ್ಕೆ 2.6 ಬಿಲಿಯನ್ ಸಿರಿಂಜ್ ಮತ್ತು ಸೂಜಿಗಳು ಬೇಕಾಗುತ್ತವೆ. ಇದರಿಂದ ಮಾಲಿನ್ಯ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣ ಎಲಾ ತಿಳಿಸಿದ್ದಾರೆ.
ಇಂಟ್ರಾ ನಾಸಲ್ ಲಸಿಕೆ ನೀಡುವುದು ಸುಲಭವೂ ಹೌದು. ಇದು ಸೂಜಿ, ಸಿರಿಂಜುಗಳು ಮುಂತಾದ ವೈದ್ಯಕೀಯ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ವ್ಯಾಕ್ಸಿನೇಷನ್ ಡ್ರೈವ್ನ ವೆಚ್ಚವೂ ಕಡಿಮೆಯಾಗುತ್ತದೆ. ಅಲ್ಲದೆ, ಈ ಲಸಿಕೆಯನ್ನು ಮೂಗಿನ ಹೊಳ್ಳೆಗೆ ಒಂದು ಹನಿ ಹಾಕಿದರೆ ಸಾಕು ಎಂದಿದ್ದಾರೆ.
ಭಾರತ್ ಬಯೋಟೆಕ್ ತನ್ನ COVID-19 ಲಸಿಕೆ ಕೋವಾಕ್ಸಿನ್‌ನ 3 ನೇ ಹಂತದ ಪ್ರಯೋಗಗಳಿಗಾಗಿ 25,800 ಸ್ವಯಂಸೇವಕರ ದಾಖಲಾತಿ ಮಾಡಿಕೊಂಡಿದೆ.