ನವದೆಹಲಿ:ದೇಶಿ ಕಂಪನಿ ಭಾರತ್ ಬಯೋಟೆಕ್ನಿಂದ ಅಭಿವೃದ್ಧಿಗೊಂಡಿರುವ ಕೋವ್ಯಾಕ್ಸಿನ್ ಈಗಾಗಲೇ ತುರ್ತು ಬಳಕೆಗೆ ಅನುಮತಿ ಪಡೆದುಕೊಂಡಿದ್ದು, ಇದೇ ವಿಚಾರವಾಗಿ ಕಂಪನಿ ಎಂಡಿ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹಂಚಿಕೊಂಡರು.
ಭಾರತ್ ಬಯೋಟೆಕ್ ಚೇರ್ಮನ್ ಸುದ್ದಿಗೋಷ್ಠಿ ಕೋವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗದ ದತ್ತಾಂಶ ಹಾಗೂ ಲಸಿಕೆ ಪರಿಣಾಮದ ಬಗ್ಗೆ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಅದು ನೀರಿನಂತೆ ಸುರಕ್ಷಿತವಾಗಿದೆ ಎಂದು ಅವರು ತಿಳಿಸಿದ್ದಾರೆ. ನಮಗೆ ಒಂದು ವಾರ ಅವಕಾಶ ನೀಡಿ. ಸಂಪೂರ್ಣ ಡೇಟಾ ನಿಮಗೆ ನೀಡುತ್ತೇವೆ ಎಂದಿರುವ ಅವರು, ಕೊರೊನಾ ವಿರುದ್ಧ ಈ ಲಸಿಕೆ ಪರಿಣಾಮಕಾರಿಯಾಗಿ ಹೋರಾಡಲಿದೆ ಎಂದಿದ್ದಾರೆ.
ಓದಿ: ಭಾರತ್ ಬಯೋಟೆಕ್ನ 'ಕೊವ್ಯಾಕ್ಸಿನ್' ಲಸಿಕೆ ತುರ್ತು ಬಳಕೆಗೆ ತಜ್ಞರ ಸಮಿತಿ ಒಪ್ಪಿಗೆ
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಡಾ. ಕೃಷ್ಣ ಎಲ್ಲ, ಕಂಪನಿ ಶೇ. 200ರಷ್ಟು ಪ್ರಾಮಾಣಿಕ ಕ್ಲಿನಿಕಲ್ ಪ್ರಯೋಗ ನಡೆಸಿದೆ. ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ತಯಾರಿಸುವಲ್ಲಿ ನಾವು ದಾಖಲೆ ಹೊಂದಿದ್ದೇವೆ. ಎಲ್ಲಾ ಡೇಟಾದೊಂದಿಗೆ ಪಾರದರ್ಶಕತೆಯಿಂದ ಈ ಲಸಿಕೆ ಕೂಡಿದ್ದು, ಯಾವುದೇ ಹಿನ್ನಡೆಯಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ಅನುಭವದ ಬಗ್ಗೆ ಆರೋಪ ಮಾಡಬೇಡಿ. ನಮ್ಮದು ಜಾಗತಿಕ ಕಂಪನಿ. ಇಲ್ಲಿಯವರೆಗೆ 16 ಲಸಿಕೆಗಳನ್ನ ತಯಾರಿಸಿದ್ದೇವೆ. ಕೇವಲ ಡೇಟಾದೊಂದಿಗೆ ಪಾರದರ್ಶಕವಾಗಿಲ್ಲ ಎಂದು ಹೇಳುವುದು ಸರಿಯಲ್ಲ. ಯುಕೆ ಸೇರಿದಂತೆ ವಿವಿಧ ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಿದ್ದೇವೆ. ನಾವು ಭಾರತೀಯ ಕಂಪನಿಯಲ್ಲ, ಆದರೆ ಜಾಗತಿಕ ಕಂಪನಿ ಎಂದು ಡಾ. ಎಲ್ಲ ತಿಳಿಸಿದ್ದಾರೆ.
ನಾವು ಈಗಾಗಲೇ ಬಹಳಷ್ಟು ಜರ್ನಲ್ ಪ್ರಕಟಿಸಿದ್ದೇವೆ. ಜಿಕಾ ವೈರಸ್ ನಾವು ಮೊದಲು ಗುರುತಿಸಿದ್ದೇವೆ. ಮತ್ತು ಲಸಿಕೆ ಕಂಡುಹಿಡಿದಿದ್ದೇವೆ. ಚಿಕೂನ್ ಗುನ್ಯಾ ಲಸಿಕೆಗಾಗಿ ಜಾಗತಿಕ ಪೇಟೆಂಟ್ ಸಲ್ಲಿಸಿದವರಲ್ಲಿ ನಾವು ಮೊದಲಿಗರು ಎಂದು ಅವರು ತಿಳಿಸಿದ್ದಾರೆ.
ಭಾರತದ ಡ್ರಗ್ ಕಂಟ್ರೋಲರ್ ಆಫ್ ಜನರಲ್ ಭಾನುವಾರ ಎರಡು ಕೋವಿಡ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದ್ದು, ಅದರಲ್ಲಿ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಸೇರಿಕೊಂಡಿವೆ.