ಹೈದರಾಬಾದ್ :ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನೊಂದಿಗೆ ಭಾರತ್ ಬಯೋಟೆಕ್ ಕೋವಿಡ್-19 ಇಂಟ್ರಾನಾಸಲ್ ಲಸಿಕೆಗಾಗಿ ಪರವಾನಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಪ್ರಕಟಿಸಿದೆ. ಈ ಮೂಲಕ ಯುಎಸ್ಎ, ಜಪಾನ್ ಮತ್ತು ಯುರೋಪ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಲಸಿಕೆ ವಿತರಿಸುವ ಹಕ್ಕನ್ನು ಭಾರತ್ ಬಯೋಟೆಕ್ ಹೊಂದಿದೆ.
ಮೊದಲ ಹಂತದ ಪ್ರಯೋಗಗಳು ಸೇಂಟ್ ಲೂಯಿಸ್ ವಿಶ್ವವಿದ್ಯಾಲಯದ ಲಸಿಕೆ ಮತ್ತು ಚಿಕಿತ್ಸಾ ಮೌಲ್ಯಮಾಪನ ಘಟಕದಲ್ಲಿ ನಡೆಯಲಿದೆ. ಅಗತ್ಯ ಅನುಮೋದನೆ ಪಡೆದ ನಂತರ ಭಾರತ್ ಬಯೋಟೆಕ್ ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಗಳ ಮುಂದಿನ ಹಂತಗಳನ್ನು ನಡೆಸಲಿದೆ. ಬಳಿಕ ಹೈದರಾಬಾದ್ನ ಜೀನೋಮ್ ವ್ಯಾಲಿಯಲ್ಲಿ ಜಿಎಂಪಿ ಸೌಲಭ್ಯದಲ್ಲಿ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಕಾರ್ಯ ನಡೆಸಲಿದೆ.
ವೈರಲ್ ಲಸಿಕೆಗಳು, ಉತ್ಪಾದನಾ ಸಾಮರ್ಥ್ಯ ಮತ್ತು ವಿತರಣೆಯಲ್ಲಿನ ನಮ್ಮ ಅನುಭವವು ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವಂತೆ ಲಸಿಕೆ ಲಭ್ಯತೆಗೆ ಸಹಾಯಕವಾಗಲಿದೆ. ಕೋವಿಡ್-19 ವಿರುದ್ಧ ಹೆಚ್ಚು ಅಗತ್ಯವಿರುವ ಲಸಿಕೆ ನೀಡಲು ಭಾರತ್ ಬಯೋಟೆಕ್ ಪ್ರಯತ್ನಿಸಲಿದೆ. ಇದು ವಿಶ್ವದ ಎಲ್ಲ ನಾಗರಿಕರನ್ನು ತಲುಪುತ್ತದೆ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಎಲಾ ಹೇಳಿದ್ದಾರೆ.
ಈ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದು, ಅಧ್ಯಯನದಲ್ಲಿ ಅಭೂತಪೂರ್ವ ರಕ್ಷಣೆ ತೋರಿದೆ. ಇದರ ತಂತ್ರಜ್ಞಾನ ಮತ್ತು ಡೇಟಾವನ್ನು ಇತ್ತೀಚೆಗೆ ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್ ಸೆಲ್ ಮತ್ತು ನೇಚರ್ ಸಂಪಾದಕೀಯದಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ಅಭಿವೃದ್ಧಿ ಹೊಂದುತ್ತಿರುವ ಕೋವಾಕ್ಸಿನ್ ವಿವಿಧ ಹಂತದ ಕ್ಲಿನಿಕಲ್ ಅಭಿವೃದ್ಧಿಯಲ್ಲಿದ್ದು, ಇದು ಪ್ರಸ್ತುತ ಭಾರತದಲ್ಲಿ ಎರಡನೇ ಹಂತದ ಮಾನವ ಕ್ಲಿನಿಕಲ್ ಪ್ರಯೋಗಗಳಲ್ಲಿದೆ.