ನವದೆಹಲಿ: ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ 'ಭಾರತ್ ಬಚಾವೊ' (ಭಾರತ ಉಳಿಸಿ) ರ‍್ಯಾಲಿ ಆಯೋಜಿಸಲಾಗಿತ್ತು. ಕೈ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ದೇಶದ ವಾಸ್ತವ ಪರಿಸ್ಥಿತಿಗೆ ಮೋದಿ ಸರ್ಕಾರ ಕಾರಣವೆಂದು ದೂರಿದ್ದು, ಅನ್ಯಾಯದ ವಿರುದ್ಧ ಹೋರಾಡುವಂತೆ ಜನತೆಗೆ ಕರೆ ನೀಡಿದ್ದಾರೆ.
ದೇಶದಲ್ಲಿ "ಅಂಧೇರ್ ನಗರಿ ಚೌಪತ್ ರಾಜಾ" ವಾತಾವರಣ- ಸೋನಿಯಾ
ರ‍್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಪಕ್ಷವು ಕೊನೆಯುಸಿರಿರುವ ವರೆಗೂ ಭಾರತ ಹಾಗೂ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸುವ ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ. ದೇಶದಲ್ಲಿ "ಅಂಧೇರ್ ನಗರಿ ಚೌಪತ್ ರಾಜಾ" (ಗೊಂದಲಮಯ ನಾಯಕ, ಗಲಿಬಿಲಿಯ ರಾಜ್ಯ) ಎನ್ನುವಂತಹ ವಾತಾವರಣವಿದೆ. ಇಡೀ ದೇಶವೇ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ' ಎಲ್ಲಿ ಎಂದು ಪ್ರಶ್ನಿಸುತ್ತಿದೆ ಎಂದು ಪಿಎಂ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.
'ಭಾರತ್ ಬಚಾವೊ' ರ‍್ಯಾಲಿಯಲ್ಲಿ ಸೋನಿಯಾ ಗಾಂಧಿ ಭಾರತದ ಆತ್ಮವನ್ನೇ ಚೂರು ಚೂರು ಮಾಡುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಕ್ಕೆ ದೇಶವೇ ಪ್ರತಿಭಟಿಸುತ್ತಿದೆ. ಮೋದಿ-ಶಾ ಸರ್ಕಾರವು ಸಂಸತ್ತು ಅಥವಾ ಸಂಸ್ಥೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಿಜವಾದ ಸಮಸ್ಯೆಗಳನ್ನು ಮರೆಮಾಡಿ, ಜನರನ್ನು ಹೋರಾಡುವಂತೆ ಮಾಡುವುದೇ ಅವರ ಏಕೈಕ ಕಾರ್ಯಸೂಚಿ. ಅವರು ಪ್ರತಿದಿನ ಸಂವಿಧಾನವನ್ನು ಉಲ್ಲಂಘಿಸುತ್ತಾ ಸಂವಿಧಾನ ದಿನವನ್ನು ಸಹ ಆಚರಿಸುತ್ತಾರೆ. ಅನ್ಯಾಯವನ್ನು ಎದುರಿಸದೇ ಅನುಭವಿಸುವುದೇ ದೊಡ್ಡ ಅಪರಾಧ. ಇದು ದೇಶ, ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಕಾಪಾಡುವ ಸಮಯ. ಇದಕ್ಕಾಗಿ ಪ್ರತಿಯೊಬ್ಬರೂ ಹೋರಾಡಬೇಕಿದೆ ಎಂದು ಕರೆ ನೀಡಿದರು.
''ನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ''- ರಾಗಾ
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ 'ರೇಪ್ ಇನ್ ಇಂಡಿಯಾ' ಹೇಳಿಕೆಗೆ ಕ್ಷಮೆಯಾಚಿಬೇಕು ಎಂದು ಪಟ್ಟುಬಿದ್ದಿರುವ ಬಿಜೆಪಿಯವರಿಗೆ ತಿರುಗೇಟು ನೀಡಿದರು. ''ನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ''. 'ಸತ್ಯ' ಮಾತನಾಡಿರುವುದಕ್ಕಾಗಿ ನಾನು ಎಂದಿಗೂ ಕ್ಷಮೆಯಾಚಿಸುವುದಿಲ್ಲ. ದೇಶದ ಆರ್ಥಿಕತೆಯನ್ನು 'ನಾಶ' ಪಡಿಸಿದ್ದಕ್ಕಾಗಿ ಪ್ರಧಾನಿ ಮೋದಿ ಹಾಗೂ ಅವರ 'ಸಹಾಯಕ' ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ಹೇಳಿದರು.
'ಭಾರತ್ ಬಚಾವೊ' ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಎಲ್ಲಿಯ ವರೆಗೆ ದೇಶದ ಯುವಕರ, ರೈತರ, ಬಡವರ ಜೇಬಲ್ಲಿ ಕಾಸು ಇರುವುದಿಲ್ಲವೋ ಅಲ್ಲಯ ವರೆಗೆ ದೇಶದ ಆರ್ಥಿಕತೆ ಸರಿಯಾಗುವುದಿಲ್ಲ. ನಮ್ಮ ದೇಶದ ಆರ್ಥಿಕತೆಯನ್ನು ನಾಶಪಡಿಸಿದವರು ಪ್ರಧಾನ ಮಂತ್ರಿಯೇ ಹೊರತು ಭಾರತದ ಶತ್ರುಗಳಲ್ಲ. ಹೀಗಿರುವಾಗ ಮೋದಿ ಇನ್ನೂ ತಮ್ಮನ್ನು ದೇಶಭಕ್ತರೆಂದು ಕರೆದುಕೊಳ್ಳುತ್ತಾರೆ ಎಂದು ಪಿಎಂ ಮೋದಿ ವಿರುದ್ಧ ಗುಡುಗಿದರು.
'ಮೋದಿ ಹೈ ತೋ ಮಮ್ಕಿನ್ ಹೈ'- ಪ್ರಿಯಾಂಕಾ ವ್ಯಂಗ್ಯ:
ಇನ್ನು ರ‍್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ, ಆರ್ಥಿಕ ಕುಸಿತ ಮತ್ತು ಮಹಿಳೆಯರ ಮೇಲಿನ ಅಪರಾಧದ ಕುರಿತು ನರೇಂದ್ರ ಮೋದಿ ಸರ್ಕಾರವನ್ನು ದೂಷಿಸಿದರು. ಅಸಂವಿಧಾನಿಕವಾದ ಕಾನೂನುಗಳನ್ನು ಅಂಗೀಕರಿಸಲಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ, ದೇಶದ ವಿಭಜನೆಗೆ ಕಾರಣವಾಗಲಿದೆ. ನಾವು ಈಗ ಧ್ವನಿ ಎತ್ತದಿದ್ದರೆ, ದೇಶವು ಮತ್ತಷ್ಟು ವಿಭಜನೆಯಾಗುತ್ತದೆ. ನೀವು ನಿಜವಾಗಿಯೂ ದೇಶವನ್ನು ಪ್ರೀತಿಸುತ್ತಿದ್ದರೆ, ಅದರ ವಿರುದ್ಧ ಧ್ವನಿ ಎತ್ತಿ ಎಂದು ಜನರಿಗೆ ಕರೆ ನೀಡಿದರು.
'ಭಾರತ್ ಬಚಾವೊ' ರ‍್ಯಾಲಿಯಲ್ಲಿ ಪ್ರಿಯಾಂಕಾ ಗಾಂಧಿ ಸುದ್ದಿ ಪತ್ರಿಕೆಗಳಲ್ಲಿ, ಬಸ್ ನಿಲ್ದಾನಗಳಲ್ಲಿ 'ಮೋದಿ ಹೈ ತೋ ಮಮ್ಕಿನ್ ಹೈ' (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂಬ ಜಾಹೀರಾತುಗಳನ್ನ ನೋಡುತ್ತಿದ್ದೇವೆ. ಆದರೆ ವಾಸ್ತವವಾಗಿ ಮೊದಿ ಸರ್ಕಾರದಲ್ಲಿ ಈರುಳ್ಳಿ ಬೆಲೆ ಕೆಜಿಗೆ 100 ರು. ಆಗಿದೆ, ನಿರುದ್ಯೋಗ 45 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ, ಆರ್ಥಿಕತೆಯು ಮಂದಗತಿಯಲ್ಲಿದೆ, ಭಾರತೀಯ ರೈಲ್ವೆಯನ್ನು ಖಾಸಗೀಕರಣಮಾಡಲಾಗುತ್ತಿದೆ. 15,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೌದು, ಮೋದಿ ಸರ್ಕಾರ ಇದ್ದರೆ ಇವೆಲ್ಲವೂ ಸಾಧ್ಯ ಎಂದು ವ್ಯಂಗ್ಯವಾಡಿದರು.
ಉನ್ನಾವೊ ಅತ್ಯಾಚಾರ ಸಂತ್ರಸ್ತೆಯನ್ನ ಆರೋಪಿಯು ಜೀವಂತವಾಗಿ ಸುಟ್ಟಿದ್ದಾನೆ. ಉನ್ನಾವೊ ಹೆಣ್ಣುಮಗಳ ರಕ್ತವು ನನ್ನ ತಂದೆಯ ರಕ್ತದಂತೆಯೇ ದೇಶದೊಂದಿಗೆ ಬೆರೆತುಹೋಗಿದೆ ಎಂದರು.