ಕರ್ನಾಟಕ

karnataka

ETV Bharat / bharat

ಬಂಡಾಯ ಶಾಸಕರ ಭೇಟಿಗೆ ಬಂದ ದಿಗ್ವಿಜಯ್ ಸಿಂಗ್: 'ಕೈ' ನಾಯಕ ಪೊಲೀಸರ ವಶಕ್ಕೆ - ರಮಡ ರೆಸಾರ್ಟ್​ ಮುಂಭಾಗ ಪ್ರತಿಭಟನೆ

ಕಾಂಗ್ರೆಸ್ ಬಂಡಾಯ ಶಾಸಕರ ಭೇಟಿಗೆ ಅವಕಾಶ ನೀಡದಿದ್ದಕ್ಕೆ ಆಕ್ರೋಶಗೊಂಡು ರಮಡಾ ರೆಸಾರ್ಟ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Digvijaya Singh sits on dharna near Ramada hotel,ಬಂಡಾಯ ಶಾಸಕರ ಭೇಟಿಗೆ ಬಂದ ದಿಗ್ವಿಜಯ್ ಸಿಂಗ್
ಬಂಡಾಯ ಶಾಸಕರ ಭೇಟಿಗೆ ಬಂದ ದಿಗ್ವಿಜಯ್ ಸಿಂಗ್

By

Published : Mar 18, 2020, 7:26 AM IST

Updated : Mar 18, 2020, 9:08 AM IST

ಬೆಂಗಳೂರು: ಮಧ್ಯಪ್ರದೇಶದ ಬಂಡಾಯ ಶಾಸಕರು ತಂಗಿರುವ ಖಾಸಗಿ ರೆಸಾರ್ಟ್​ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸರ್ಕಾರದ ವಿರುದ್ಧ ಸಿಡಿದೆದ್ದು ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದಿರುವ ಕಾಂಗ್ರೆಸ್​ನ 21 ಶಾಸಕರು ಖಾಸಗಿ ರೆಸಾರ್ಟ್​ನಲ್ಲಿ ತಂಗಿದ್ದಾರೆ. ಹೀಗಾಗಿ ಕಮಲನಾಥ್ ಸರ್ಕಾರಕ್ಕೆ ಕಂಟಕ ಎದುರಾಗಿದೆ. ಬಂಡಾಯ ಶಾಸಕರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕ ದಿಗ್ವಿಜಯ್​ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದರು.

ದಿಗ್ವಿಜಯ ಸಿಂಗ್ ಜೊತೆ ಮಧ್ಯಪ್ರದೇಶ ಶಾಸಕ ಆರೀಫ್ ಮಸೂದ್ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕರ್ನಾಟಕ ಶಾಸಕರಾದ ಕೃಷ್ಣಭೈರೇಗೌಡ, ಹ್ಯಾರಿಸ್, ರಿಜ್ವಾನ್ ಅರ್ಷದ್, ಯುವ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದರು. ಆದರೆ ಪೊಲೀಸರು ಅವರನ್ನು ರೆಸಾರ್ಟ್​ ಒಳಗೆ ತೆರಳಲು ಅವಕಾಶ ನೀಡಿಲ್ಲ. ಇದರಿಂದ ಅಸಮಾಧಾನಗೊಂಡ ಸಿಂಗ್ ಪ್ರತಿಭಟನೆಗಿಳಿದರು.

ಬಂಡಾಯ ಶಾಸಕರ ಭೇಟಿಗೆ ಬಂದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್

ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ನಾಗೇನಹಳ್ಳಿ ಬಳಿ ಪೊಲೀಸರು ತಡೆವೊಡ್ಡಿದ್ದರಿಂದ ದಿಗ್ವಿಜಯ ಸಿಂಗ್ ಹಾಗೂ ಶಾಸಕರು ರಸ್ತೆಯಲ್ಲೇ ಕುಳಿತು ಆಕ್ರೋಶ ಹೊರಹಾಕಿದರು.

ಇದೇ ವೇಳೆ ಮಾತನಾಡಿದ ಅವರು, ನಾನು ಮಧ್ಯಪ್ರದೇಶದ ರಾಜ್ಯಸಭಾ ಅಭ್ಯರ್ಥಿಯಾಗಿದ್ದೇನೆ. ಮಾರ್ಚ್ 26 ರಂದು ಮತದಾನ ನಡೆಯಲಿದೆ. ನಮ್ಮ ಶಾಸಕರನ್ನು ಇಲ್ಲಿ ಇರಿಸಿದ್ದು, ಅವರು ನನ್ನೊಂದಿಗೆ ಮಾತನಾಡಲು ಬಯಸುತ್ತಿದ್ದಾರೆ. ಆದರೆ ಅವರ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ, ಶಾಸಕರಿಗೆ ಭದ್ರತಾ ಬೆದರಿಕೆ ಇದೆ. ಶಾಸಕರೊಂದಿಗೆ ಮಾತನಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ದೂರಿದರು.

ನಾವೇನೂ ಗೂಂಡಾಗಳಲ್ಲ. ನಮ್ಮ ಬಳಿ ಯಾವುದೇ ಆಯುಧಗಳಿಲ್ಲ. ರೆಸಾರ್ಟ್​ನಲ್ಲಿ ತಂಗಿರುವ 22 ಜನ ಶಾಸಕರನ್ನು ಗೆಲ್ಲಿಸುವಲ್ಲಿ ನಮ್ಮ ಶ್ರಮವಿದೆ. ಬಿಜೆಪಿ ಅವರನ್ನ ಎದುರು ಹಾಕಿಕೊಂಡು ಗೆಲ್ಲಿಸಿದ್ದೇವೆ. ಆದರೆ, ಅವರೊಂದಿಗೆ ಸೇರಿ ನಮಗೆ ಮೋಸ ಮಾಡಲು ಹೊರಟಿದ್ದಾರೆ. ನಿನ್ನೆ ಸುದ್ದಿಗೋಷ್ಠಿಯಲ್ಲಿ ಕೆಲವೇ ಶಾಸಕರು ಮಾತನಾಡಿದ್ದಾರೆ. ಇನ್ನುಳಿದವರು ಭಯದಲ್ಲಿದ್ದಾರೆ. ಎಲ್ಲಾ ಶಾಸಕರನ್ನು ಭೇಟಿ ಮಾಡದೆ ಯಾವುದೇ ಕಾರಣಕ್ಕೂ ಹಿಂದಿರುಗುವುದಿಲ್ಲ ಎಂದು ಪಟ್ಟುಹಿಡಿದರು.

ಬಳಿಕ ದಿಗ್ವಿಜಯ ಸಿಂಗ್ ಸೇರಿದಂತೆ ಕೆಲ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

Last Updated : Mar 18, 2020, 9:08 AM IST

ABOUT THE AUTHOR

...view details