ಕೋಲ್ಕತಾ (ಪಶ್ಚಿಮ ಬಂಗಾಳ) : ತೆಲಂಗಾಣದಲ್ಲಿ ಪ್ರವಾಹದಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕಾಗಿ 2 ಕೋಟಿ ರೂಪಾಯಿಗಳ ಹಣಕಾಸಿನ ನೆರವು ನೀಡಿದ್ದಾರೆ.
ಈ ಬಗ್ಗೆ ತೆಲಂಗಾಣ ಸಿಎಂಗೆ ಪತ್ರ ಬರೆದಿರುವ ಮಮತಾ ಬ್ಯಾನರ್ಜಿ, ''ಕೆಲವು ದಿನಗಳಿಂದ ತೆಲಂಗಾಣದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಸಾಕಷ್ಟು ಹಾನಿಯಾಗಿರುವುದು ದುಃಖದ ವಿಚಾರವಾಗಿದೆ'' ಎಂದಿದ್ದು, ಮಳೆಯಿಂದಾಗಿ ಪ್ರಾಣ ಕಳೆದುಕೊಂಡವರಿಗೂ ಪತ್ರದಲ್ಲಿ ಸಂತಾಪ ಸೂಚಿಸಿದ್ದಾರೆ.
ಕಠಿಣ ಸಮಯದಲ್ಲಿ ಪಶ್ಚಿಮ ಬಂಗಾಳದ ಜನತೆ ಯಾವಾಗಲೂ ತೆಲಂಗಾಣದ ಸಹೋದರ ಹಾಗೂ ಸಹೋದರಿಯರ ನೆರವಿಗೆ ನಿಲ್ಲುತ್ತಾರೆ. ಅವರ ನೆರವಿಗೆ ಧಾವಿಸುವ ಸಲುವಾಗಿ 2 ಕೋಟಿ ರೂಪಾಯಿಗಳನ್ನು ಪಶ್ಚಿಮ ಬಂಗಾಳ ಸರ್ಕಾರ ನೀಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಬರೆದಿದ್ದಾರೆ.