ನವದೆಹಲಿ:ಕೊರೊನಾ ಸಂಕಷ್ಟದ ಸಮಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಹಾಯವಾಗಿದ್ದು,ಕಳೆದ ವರ್ಷಕ್ಕಿಂತ ಜುಲೈನಲ್ಲಿ ಶೇ.114ಕ್ಕಿಂತ ಅಧಿಕ ಪ್ರಮಾಣದ ಕೆಲಸವನ್ನ ನೀಡಲಾಗಿದೆ ಎಂದು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮಾಹಿತಿ ನೀಡಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಸಚಿವಾಯಲವು ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿ ಶೇಕಡಾ 73 ರಷ್ಟು ಫಲಾನುಭವಿಗಳು ಇದರ ಲಾಭವನ್ನು ಪಡೆದಿದ್ದು, ಜೂನ್ ಮತ್ತು ಜುಲೈನಲ್ಲಿ ಇದು ಶೇಕಡಾ 92ರಷ್ಟಾಗಿದೆ ಎಂದು ಹೇಳಿದೆ.
ಕೊರೊನಾ ಮಹಾಮಾರಿಯಿಂದ ವಲಸೆ ಕಾರ್ಮಿಕರು ಸಾಕಷ್ಟು ಸಂಕಷ್ಟ ಎದುರಿಸಿದ್ದು, ಈ ವೇಳೆ ಸರ್ಕಾರ ಆಯಾ ಹಳ್ಳಿಗಳಲ್ಲಿ ಜೀವನೋಪಾಯ ಒದಗಿಸುವ ಸಲುವಾಗಿ ಈ ಯೋಜನೆಗೆ ಹೆಚ್ಚಿನ ಒತ್ತು ನೀಡಿತು. ಅಷ್ಟೆ ಅಲ್ಲದೇ ಕೇಂದ್ರ ಸರ್ಕಾರವು ಈ ಯೋಜನೆಯಡಿ ಕೂಲಿ ಕಾರ್ಮಿಕರ ವೇತನವನ್ನು 182 ರೂ.ಗಳಿಂದ 202 ರೂ.ಗೆ ಏರಿಕೆ ಮಾಡಿತ್ತು.
2020 - 21ರ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ 61,500 ಕೋಟಿ ರೂ.ಗಳಿಗೆ ಮೀಸಲಿಡಲಾಗಿತ್ತು. ಆದರೆ, ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆ ಅಡಿ ಸುಮಾರು 40,000 ಕೋಟಿ ರೂ.ಗಳನ್ನು ಹೆಚ್ಚವರಿಯಾಗಿ ನೀಡಿದೆ.