ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಬಹುನಿರೀಕ್ಷಿತ ಚಂದ್ರಯಾನ 2 ಕೊನೆ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡಿದೆ. 2.1 ಕಿಲೋ ಮೀಟರ್‌ನ ನಂತರ ವಿಕ್ರಂ ಲ್ಯಾಂಡರ್ನಿಂದ ಇಸ್ರೋ ವಿಜ್ಞಾನಿಗಳಿಗೆ ಯಾವುದೇ ಸಿಗ್ನಲ್ ಸಿಗಲಿಲ್ಲ ಎಂಬ ಮಾತನ್ನು ಇಸ್ರೋ ಅಧ್ಯಕ್ಷ ಕೆ.ಸಿವನ್ ಪ್ರಕಟಿಸಿದರು. ಇದಕ್ಕೂ ಮುನ್ನ ಅವರು ಪ್ರಧಾನಿಗೆ ಸಂಪೂರ್ಣ ವಿವರಣೆ ನೀಡಿದ್ದರು.
ಈ ವೇಳೆ ಇಸ್ರೋ ಮಹತ್ವಾಕಾಂಕ್ಷೆ ಯೋಜನೆ ವೀಕ್ಷಣೆ ಮಾಡಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ವಿಜ್ಞಾನಿಗಳಿಗೆ ಬೆನ್ನು ತಟ್ಟಿ ಧೈರ್ಯ ತುಂಬಿದರು. ಜೀವನದಲ್ಲಿ ಏಳು-ಬೀಳು ಸಹಜ. ನಿವೆಲ್ಲರೂ ವಿಜ್ಞಾನ ಕೇತ್ರ ಹಾಗೂ ದೇಶಕ್ಕೆ ಅತಿದೊಡ್ಡ ಕೊಡುಗೆ ನೀಡಿದ್ದೀರಿ. ನಿಮ್ಮ ಸಾಧನೆ ಸಣ್ಣದಲ್ಲ. ಇಡೀ ದೇಶವೇ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಿದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ. ನನ್ನ ಕಡೆಯಿಂದ ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆಗಳು. ನಿಮ್ಮ ಮುಂದಿನ ಕಾರ್ಯಕ್ಕೆ ನಾವು ಸಾಥ್ ನೀಡಲಿದ್ದೇವೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ತಿಳಿಸಿದರು.