ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಮೂಲಭೂತ ಸೌಕರ್ಯಗಳ ಹಂಚಿಕೆ; ಗಮನಾರ್ಹ ಸಾಧನೆ

ನಗರ ಹಾಗೂ ಗ್ರಾಮೀಣ ಭಾಗಗಳನ್ನು ಗಮನಿಸಿದರೆ, 2012ಕ್ಕಿಂತ 2018ರ ಹೊತ್ತಿಗೆ ಅಂತಾರಾಜ್ಯ ಮೂಲಭೂತ ಸೌಕರ್ಯಗಳ ಲಭ್ಯತೆಯ ಅಸಮತೋಲನ ಸಾಕಷ್ಟು ನಿವಾರಣೆಯಾಗಿದೆ. 2012ರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮೂಲ ಸೌಕರ್ಯಗಳನ್ನು ಹೊಂದಿದ್ದ ರಾಜ್ಯಗಳು ಈ ವಿಷಯದಲ್ಲಿ ಮುನ್ನಡೆ ಸಾಧಿಸಿದ್ದೇ ಇದಕ್ಕೆ ಕಾರಣವಾಗಿದೆ.

Bare Necessities Index (BNI) at the rural, urban and all India level
ದೇಶದಲ್ಲಿ ಮೂಲಭೂತ ಸೌಕರ್ಯಗಳ ಹಂಚಿಕೆ; ಗಮನಾರ್ಹ ಸಾಧನೆ

By

Published : Jan 31, 2021, 7:45 PM IST

ಸಮಾಜದಲ್ಲಿ ಮಾನವರು ಗುಣಮಟ್ಟದ ಹಾಗೂ ಘನತೆಯ ಜೀವನ ನಡೆಸಬೇಕಾದರೆ ಅವರಿಗೆ ಕೆಲ ಅಗತ್ಯ ಮೂಲಭೂತ ಸೌಕರ್ಯಗಳು ಸಿಗುವುದು ಅವಶ್ಯ. ಮನೆ, ನೀರು, ನೈರ್ಮಲ್ಯ, ವಿದ್ಯುತ್ ಮತ್ತು ಹಸಿರು ಅಡುಗೆ ಇಂಧನ ಮುಂತಾದ ಮೂಲ ಸೌಕರ್ಯಗಳು ಉತ್ತಮ ಜೀವನಕ್ಕೆ ಬಹಳ ಪ್ರಮುಖವಾಗಿವೆ. ದೇಶದಲ್ಲಿ ಈ ಮೂಲಭೂತ ಸೌಕರ್ಯಗಳ ಹಂಚಿಕೆಯನ್ನು ಅಳೆಯಲು ಮೂಲಭೂತ ಸೌಕರ್ಯ ಸೂಚ್ಯಂಕವನ್ನು ಬಳಸಲಾಗುತ್ತದೆ. ಭಾರತದ ಗ್ರಾಮೀಣ, ನಗರ ಹಾಗೂ ರಾಷ್ಟ್ರಮಟ್ಟದಲ್ಲಿ ಮೂಲಭೂತ ಸೌಕರ್ಯ ಸೂಚ್ಯಂಕದ ಅಂಕಿ-ಅಂಶಗಳು ಹೇಗಿವೆ ಎಂಬುದನ್ನು ನೋಡೋಣ.

ಮೂಲಭೂತ ಸೌಕರ್ಯ ಸೂಚ್ಯಂಕ (Bare Necessities Index - BNI) ಇದು ನೀರು, ನೈರ್ಮಲ್ಯ, ಸೂರು, ಸೂಕ್ಷ್ಮ ಪರಿಸರ ಹಾಗೂ ಇನ್ನಿತರ ವಿಷಯಗಳ 26 ಅಂಶಗಳನ್ನಾಧರಿಸಿದ ಸೂಚ್ಯಂಕವಾಗಿದೆ. 2012 ರಿಂದ 2018 ರವರೆಗೆ ರಾಷ್ಟ್ರೀಯ ಸಾಂಖ್ಯಿಕ ಇಲಾಖೆ ಸಂಗ್ರಹಿಸಿದ ಎಲ್ಲ ರಾಜ್ಯಗಳ ಅಂಕಿ ಸಂಖ್ಯೆಗಳನ್ನು ಆಧರಿಸಿ ಬಿಎನ್​ಐ ತಯಾರಿಸಲಾಗಿದೆ.

2012 ಕ್ಕೆ ಹೋಲಿಸಿದರೆ 2018ರ ಹೊತ್ತಿಗೆ ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಮೂಲಭೂತ ಸೌಕರ್ಯಗಳ ಸೌಲಭ್ಯ ಗಮನಾರ್ಹವಾಗಿ ಸುಧಾರಿಸಿದೆ. ಕೇರಳ, ಪಂಜಾಬ, ಹರಿಯಾಣ ಮತ್ತು ಗುಜರಾತ್ ರಾಜ್ಯಗಳಲ್ಲಿ ಮೂಲ ಸೌಕರ್ಯಗಳ ಲಭ್ಯತೆ ಅತ್ಯುತ್ತಮವಾಗಿದ್ದರೆ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ತ್ರಿಪುರಾಗಳಲ್ಲಿ ಅತ್ಯಂತ ಕಳಪೆಯಾಗಿದೆ.

ನಗರ ಹಾಗೂ ಗ್ರಾಮೀಣ ಭಾಗಗಳನ್ನು ಗಮನಿಸಿದರೆ, 2012ಕ್ಕಿಂತ 2018ರ ಹೊತ್ತಿಗೆ ಅಂತಾರಾಜ್ಯ ಮೂಲಭೂತ ಸೌಕರ್ಯಗಳ ಲಭ್ಯತೆಯ ಅಸಮತೋಲನ ಸಾಕಷ್ಟು ನಿವಾರಣೆಯಾಗಿದೆ. 2012ರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮೂಲ ಸೌಕರ್ಯಗಳನ್ನು ಹೊಂದಿದ್ದ ರಾಜ್ಯಗಳು ಈ ವಿಷಯದಲ್ಲಿ ಮುನ್ನಡೆ ಸಾಧಿಸಿದ್ದೇ ಇದಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹಾಗೂ ಬಿಎನ್​ಐ ಅಂಕಿ ಅಂಶಗಳನ್ನು ಹೋಲಿಸಿ ನೋಡಿದಾಗ ಕೆಲ ಕುತೂಹಲಕಾರಿ ಅಂಶಗಳು ಕಂಡು ಬರುತ್ತವೆ. ಬಿಎನ್​ಐ ಸೂಚ್ಯಂಕ ಹೆಚ್ಚಾಗುತ್ತಿದ್ದಂತೆಯೇ ಸಮಗ್ರ ಆರೋಗ್ಯ ವ್ಯವಸ್ಥೆಯೂ ಸುಧಾರಿಸಿರುವುದು ಕಂಡು ಬಂದಿದೆ.

ಮೂಲಭೂತ ಸೌಕರ್ಯ ಕಲ್ಪಿಸುವ ಸರ್ಕಾರದ ಯೋಜನೆಗಳು:

ಸ್ವಚ್ಛ ಭಾರತ ಮಿಷನ್:ದೇಶದ ಗ್ರಾಮೀಣ ಭಾಗವನ್ನು ಅಕ್ಟೋಬರ್ 2, 2019ರ ಒಳಗೆ ಸಂಪೂರ್ಣ ಬಯಲು ಶೌಚ ಮುಕ್ತವನ್ನಾಗಿ ಮಾಡುವುದು ಸ್ವಚ್ಛ ಭಾರತ ಮಿಷನ್​ನ ಪ್ರಮುಖ ಗುರಿಯಾಗಿತ್ತು. ಇನ್ನು ಎಲ್ಲ ನಗರ ಪ್ರದೇಶಗಳನ್ನು ಶೇಕಡಾ ನೂರರಷ್ಟು ಬಯಲು ಶೌಚ ಮುಕ್ತಗೊಳಿಸುವುದು ಹಾಗೂ ಸಂಗ್ರಹವಾಗುವ ಸಂಪೂರ್ಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಸಹ ಈ ಯೋಜನೆಯ ಉದ್ದೇಶವಾಗಿದೆ.

ಸ್ವಚ್ಛ ಭಾರತ ಯೋಜನೆಯಡಿ ಗ್ರಾಮೀಣ ನೈರ್ಮಲ್ಯ ವಿಭಾಗದಲ್ಲಿ ಬಹು ದೊಡ್ಡ ಕ್ರಾಂತಿಯೇ ಉಂಟಾಗಿದೆ. ಈ ಯೋಜನೆಯಡಿ ದೇಶದ ಹಳ್ಳಿಗಳಲ್ಲಿ ಸುಮಾರು 10 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಸಾಧನೆಯನ್ನು ಮುಂದುವರಿಸುವ ಸಲುವಾಗಿ 2020-21 ರಿಂದ 2024-25ರವರೆಗೆ ಯೋಜನೆಯ ಎರಡನೇ ಹಂತವನ್ನು ಜಾರಿಗೊಳಿಸಲಾಗುತ್ತಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ: 2022ರೊಳಗೆ ದೇಶದ ಎಲ್ಲ ಗ್ರಾಮ ಹಾಗೂ ನಗರನಿವಾಸಿಗಳಿಗೆ ಸೂರು ಒದಗಿಸುವ ದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯಡಿ 2021ರ ಜನೇವರಿ 18ರ ಹೊತ್ತಿಗೆ 109.2 ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಗಿದೆ.

ಜಲಜೀವನ ಮಿಷನ್ ಯೋಜನೆ: ದೇಶದ ಎಲ್ಲ ಗ್ರಾಮೀಣ ನಿವಾಸಿಗಳಿಗೆ ಶುದ್ಧ ಕುಡಿಯುವ ಹಾಗೂ ಬಳಕೆಯ ನೀರು ಪೂರೈಕೆಯ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸದ್ಯ ದೇಶದ 18.93 ಗ್ರಾಮೀಣ ಕುಟುಂಬಗಳ ಪೈಕಿ 3.23 ಕೋಟಿ ಮನೆಗಳಿಗೆ ನಲ್ಲಿ ನೀರು ಸರಬರಾಜಾಗುತ್ತಿದೆ. 2024 ರ ಹೊತ್ತಿಗೆ ಉಳಿದ 15.70 ಕೋಟಿ ಮನೆಗಳಿಗೂ ಶುದ್ಧ ಕುಡಿಯುವ ನೀರು ತಲುಪಿಸುವ ಗುರಿ ಈ ಯೋಜನೆಯದ್ದಾಗಿದೆ.

ಸಹಜ್ ಬಿಜಲಿ ಹರ್ ಘರ್ ಯೋಜನಾ-ಸೌಭಾಗ್ಯ: ಈ ಯೋಜನೆಯಡಿ ಮಾರ್ಚ್ 2019ರ ವೇಳೆಗೆ ವಿದ್ಯುತ್ ಸಂಪರ್ಕ ರಹಿತ ಎಲ್ಲ ಗ್ರಾಮೀಣ ಹಾಗೂ ನಗರ ಪ್ರದೇಶದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿತ್ತು. ಬಹುತೇಕ ಎಲ್ಲ ರಾಜ್ಯಗಳು ಈ ಗುರಿಯನ್ನು ಸಾಧಿಸಿದ್ದು, ತಮ್ಮ ರಾಜ್ಯಗಳ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಘೋಷಿಸಿವೆ. ಛತ್ತೀಸಗಢದ ನಕ್ಸಲ್ ಪೀಡಿತ ಕೆಲ ಪ್ರದೇಶಗಳಲ್ಲಿ ಮಾತ್ರ ಈ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ.

ಪ್ರಧಾನ ಮಂತ್ರಿ ಉಜ್ವಲ ಯೋಜನಾ:ಮೇ 2016 ರಲ್ಲಿ ಜಾರಿಯಾದ ಈ ಯೋಜನೆಯಡಿ ಎಲ್ಲ ಬಡ ಕುಟುಂಬಗಳಿಗೆ ಎಲ್ಪಿಜಿ ಸೌಕರ್ಯ ನೀಡುವ ಗುರಿ ಹೊಂದಲಾಗಿದೆ. ಯೋಜನೆಯಡಿ ಯಾವುದೇ ಡಿಪಾಸಿಟ್ ಶುಲ್ಕವಿಲ್ಲದೆ 8 ಕೋಟಿ ಎಲ್ಪಿಜಿ ಕನೆಕ್ಷನ್ ನೀಡುವುದು ಸರ್ಕಾರದ ಗುರಿಯಾಗಿದೆ. ಸೆಪ್ಟೆಂಬರ್ 2019ರ ವೇಳೆಗೆ 8 ಕೋಟಿ ಎಲ್ಪಿಜಿ ಕನೆಕ್ಷನ್​ಗಳನ್ನು ನೀಡಲಾಗಿದ್ದು, ಯೋಜನೆಯು ಸಂಪೂರ್ಣ ಯಶಸ್ವಿಯಾಗಿದೆ.

ABOUT THE AUTHOR

...view details