ನವದೆಹಲಿ: ಜನವರಿ 31 ಮತ್ತು ಫೆಬ್ರವರಿ 1ರಂದು ಎರಡು ದಿನ ಮುಷ್ಕರ ನಡೆಸಲು ಬ್ಯಾಂಕ್ ನೌಕರರ ಒಕ್ಕೂಟ ನಿರ್ಧರಿಸಿದೆ.
ವೇತನ ಮಂಡಳಿ ಪರಿಷ್ಕರಣೆ, ವೇತನ ಹೆಚ್ಚಳ, ಪಿಂಚಣಿ ಶೇಕಡಾವಾರು ಮತ್ತು 2010ರ ನಂತರ ಸೇರ್ಪಡೆಗೊಂಡ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗಳನ್ನು ಸುಗಮಗೊಳಿಸುವಂತೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (UFBU) ಒತ್ತಾಯಿಸುತ್ತಿದೆ. ಆದಾಗಿಯೂ ಕೇಂದ್ರ ಸರ್ಕಾರ ಇನ್ನೂ UFBUನ ಬೇಡಿಕೆಗಳನ್ನು ಈಡೇರಿಸಿಲ್ಲ.
ಈ ಬಗ್ಗೆ ಮಾತನಾಡಿರುವ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ, ನಾವು ಮುಷ್ಕರವನ್ನು ಘೋಷಿಸಿದಾಗ ಕೇಂದ್ರ ಸರ್ಕಾರವು ಶಾಂತಿ ಸಭೆ ಕರೆಯಿತು. ಆದರೆ ನಮ್ಮ ಬೇಡಿಕೆಗಳಿಗೆ ಸರ್ಕಾರಿ ಪ್ರತಿನಿಧಿಗಳು ಒಪ್ಪಲಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವ ಬದಲು ಮುಷ್ಕರ ಹಿಂತೆಗೆದುಕೊಳ್ಳುವಂತೆ ಕೇಳುತ್ತಿದ್ದಾರೆ. ಹೀಗಾಗಿ ಮುಷ್ಕರವನ್ನು ಮುಂದುವರೆಸುವಸುತ್ತಿದ್ದೇವೆ ಎಂದಿದ್ದಾರೆ.
ಇನ್ನು ಮಾರ್ಚ್ 11, 12 ಮತ್ತು 13ರಂದು ಕೂಡಾ ಮೂರು ದಿನಗಳ ಕಾಲ ಮುಷ್ಕರ ನಡೆಸಲು UFBU ನಿರ್ಧರಿಸಿದ್ದು, ಈ ಮುಷ್ಕರದ ಮೂಲಕ ನವೆಂಬರ್ 1, 2017ರಿಂದ ಬಾಕಿ ಇರುವ ಆರಂಭಿಕ ವೇತನ ಪರಿಷ್ಕರಣೆ ಇತ್ಯರ್ಥಕ್ಕೆ ಒತ್ತಾಯ ಮಾಡಲಾಗುತ್ತದೆ. ಐದು ವರ್ಷಗಳಿಗೊಮ್ಮೆ ಸರ್ಕಾರವು ಬ್ಯಾಂಕ್ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಬೇಕು. ಕೊನೆಯ ವೇತನ ಹೆಚ್ಚಳ ಒಪ್ಪಂದವು ಅಕ್ಟೋಬರ್ 2017ರಲ್ಲಿ ಕೊನೆಗೊಳ್ಳುತ್ತಿದ್ದಂತೆ ಸರ್ಕಾರವು ನವೆಂಬರ್ 2017ರಲ್ಲಿ ಒಪ್ಪಂದವನ್ನು ನವೀಕರಿಸಬೇಕಿತ್ತು ಎಂದು ವೆಂಕಟಾಚಲಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.