ಕರ್ನಾಟಕ

karnataka

ETV Bharat / bharat

ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಭಾರತಯಾತ್ರೆ: ಮನೆಗೆ ಕರೆಸಿ ಶುಭ ಕೋರಿದ ಡಿಸಿಎಂ - Janmabhoomi Karmabhoomi'

ಸಂಗೀತ ಕಲಾವಿದರಾದ ಉಮೇಶ ಗೋಪಿನಾಥ್ ಯಾದವ್ ಅವರು ಬೆಂಗಳೂರಿನ ಸರ್ಜಾಪುರದ ನಿವಾಸಿ. ನಾಡು - ನುಡಿ ಆರಾಧಕರು, ಅಪರಿಮಿತ ದೇಶಭಕ್ತರಾಗಿದ್ದು, ಇದುವರೆಗೂ ದೇಶದ ಮೇಲೆ ನಡೆದ ಭಯೋತ್ಪಾದಕ ದಾಳಿಗಳು ಹಾಗೂ ಯುದ್ಧಗಳಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಈ ಯಾತ್ರೆ ಕೈಗೊಂಡಿದ್ದಾರೆ.

Bangalore Patriotic India Tour news
ಹುತಾತ್ಮ ಯೋಧರಿಗೆ ಗೌರವಾರ್ಥ ಸಲ್ಲಿಸಲು ಭಾರತಯಾತ್ರೆ

By

Published : Nov 4, 2020, 5:02 PM IST

ಬೆಂಗಳೂರು: ಕಾರ್ಗಿಲ್ ಯುದ್ಧ, ಪುಲ್ವಾಮಾ ದಾಳಿ ಸೇರಿ ವಿವಿಧ ಯುದ್ಧಗಳು ಹಾಗೂ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ʼದೇಶಪ್ರೇಮ ಭಾರತಯಾತ್ರೆʼ ಕೈಗೊಂಡಿರುವ ಬೆಂಗಳೂರು ಮೂಲದ ಉಮೇಶ್ ಗೋಪಿನಾಥ್ ಜಾಧವ್ ಅವರು ಎರಡನೇ ಹಂತದ ಯಾತ್ರೆ ಆರಂಭಿಸಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಸಿರು ನಿಶಾನೆ ತೋರಿದರು.

ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಭಾರತಯಾತ್ರೆ

ಮಂಗಳವಾರ ಸಂಜೆ ತಮ್ಮ ನಿವಾಸದಲ್ಲಿ ಜಾಧವ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸತ್ಕರಿಸಿದ ಡಿಸಿಎಂ, ಯಾವುದೇ ರಾಜಕೀಯ ಉದ್ದೇಶವಿಲ್ಲದ, ಯಾರ ಪ್ರಾಯೋಜಕತ್ವವೂ ಇಲ್ಲದ, ದೇಶಪ್ರೇಮವನ್ನಷ್ಟೇ ಇಟ್ಟುಕೊಂಡು ಹುತಾತ್ಮ ಯೋಧರ ಗೌರವಾರ್ಥ ಅವರು ಕೈಗೊಂಡಿರುವ ದೇಶಪ್ರೇಮ ಭಾರತ ಯಾತ್ರೆಯನ್ನು ಮನಸಾರೆ ಶ್ಲಾಘಿಸಿದರು.

ಯಾರು ಈ ಜಾಧವ್?

ಮೂಲತಃ ಸಂಗೀತ ಕಲಾವಿದರಾದ ಉಮೇಶ ಗೋಪಿನಾಥ್ ಯಾದವ್ ಅವರು ಬೆಂಗಳೂರಿನ ಸರ್ಜಾಪುರದ ನಿವಾಸಿ. ನಾಡು - ನುಡಿ ಆರಾಧಕರೂ, ಅಪರಿಮಿತ ದೇಶಭಕ್ತರಾಗಿದ್ದು, ಇದುವರೆಗೂ ದೇಶದ ಮೇಲೆ ನಡೆದ ಭಯೋತ್ಪಾದಕ ದಾಳಿಗಳು ಹಾಗೂ ಯುದ್ಧಗಳಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಈ ಯಾತ್ರೆ ಕೈಗೊಂಡಿದ್ದಾರೆ.

ಹೇಗಿರುತ್ತದೆ ಭಾರತಯಾತ್ರೆ?

ಬೆಂಗಳೂರಿನಿಂದಲೇ 2019 ಏಪ್ರಿಲ್ 9 ರಿಂದ 2020 ಏಪ್ರಿಲ್ 9ರವೆರಗೆ ಮೊದಲ ಸುತ್ತಿನ ಯಾತ್ರೆ ಪೂರೈಸಿರುವ ಜಾಧವ್, ಈಗಾಗಲೇ ಮೊದಲ ಸುತ್ತಿನ ಯಾತ್ರೆ ವೇಳೆ 98 ಹುತಾತ್ಮ ಯೋಧರ ಮನೆಗಳಿಗೆ ಭೇಟಿ ನೀಡಿದ್ದಾರೆ. ಅವರ ಸಮಾಧಿಯ ಮಣ್ಣು ಸಂಗ್ರಹ ಮಾಡಿದ್ದರಲ್ಲದೇ, ಅವರ ಪೋಷಕರ ಜತೆ ಮಾತನಾಡಿದ್ದಾರೆ. ಗುಜರಾತ್​​ನ ಕಛ್ ಮುಂತಾದ ಕಡೆಗೂ ಭೇಟಿ ನೀಡಿ ಹುತಾತ್ಮ ಯೋಧರ ಕುಟುಂಬಗಳು, ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಯೋಧರು, ಸೇನಾಧಿಕಾರಿಗಳನ್ನು ಭೇಟಿಯಾಗಿದ್ದಾರೆ. ದೇಶದ 28 ರಾಜ್ಯಗಳು, 9 ಕೇಂದ್ರಾಡಳಿತ ಪ್ರದೇಶಗಳಲ್ಲಿ ಅವರು ಯಾತ್ರೆ ನಡೆಸುತ್ತಿದ್ದಾರೆ.

ಆ ಮಣ್ಣಿನಿಂದ ಭಾರತ ಭೂಪಟ:

ದೇಶದ ಉದ್ದಗಲಕ್ಕೂ ಹುತಾತ್ಮ ಯೋಧರ ಸಮಾಧಿಗಳಿಂದ ಸಂಗ್ರಹ ಮಾಡುತ್ತಿರುವ ಪವಿತ್ರ ಮಣ್ಣನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗಲಿರುವ ಸೇನಾ ಸ್ಮಾರಕದಲ್ಲಿ ಭಾರತದ ಭೂಪಟವನ್ನು ನಿರ್ಮಿಸುವುದು ಜಾಧವ್ ಅವರ ಉದ್ದೇಶ. ಈ ಉದ್ದೇಶದೊಂದಿಗೆ ಅವರು ದೇಶಪ್ರೇಮ ಭಾರತಯಾತ್ರೆ ಕೈಗೊಂಡಿದ್ದಾರೆ.

65,000 ಕಿ.ಮೀ ಯಾತ್ರೆ ಪೂರ್ಣ:

ಈಗಾಗಲೇ ಜಾಧವ್ ಅವರು ಭಾರತದ ಉದ್ದಗಲಕ್ಕೂ 65,000 ಕಿ.ಮೀ ಯಾತ್ರೆಯನ್ನು ಪೂರೈಸಿ ಅಷ್ಟೂ ಕಡೆಗಳಲ್ಲಿ ಹುತಾತ್ಮ ಯೋಧರ ಸಮಾಧಿ ಸ್ಥಳಗಳಿಗೆ ಭೇಟಿ ನಮನ ಸಲ್ಲಿಸಿ, ಮಣ್ಣು ಸಂಗ್ರಹಿಸಿದ್ದಾರೆ. ಕೋವಿಡ್ -19 ಕಾರಣಕ್ಕೆ ಅವರು ಕಳೆದ ಮಾರ್ಚ್ ನಲ್ಲಿ ಛತ್ತೀಸಗಢದ ಸುಕ್ಮಾದಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಿದ್ದರು. ಇದೀಗ ಅನ್​​ಲಾಕ್ ಆದ ಮೇಲೆ ಪುನಾ ತಮ್ಮ ಯಾತ್ರೆಯನ್ನು ಆರಂಭಿಸಿದ್ದಾರೆ. 2020ರ ಏಪ್ರಿಲ್ 21ಕ್ಕೆ ಪುನಾರಂಭ ಆಗಿರುವ ಅವರ ಯಾತ್ರೆಯು 2021 ಏಪ್ರಿಲ್ 21ರಂದು ಮುಕ್ತಾಯವಾಗಲಿದೆ. ಈ ಎರಡನೇ ಹಂತದಲ್ಲಿ ಒಟ್ಟು 50,000 ಕಿ.ಮೀ. ದೂರವನ್ನು ಜಾಧವ್ ಕ್ರಮಿಸಲಿದ್ದಾರೆ. 730 ದಿನಗಳ ಈ ಯಾತ್ರೆ ಒಟ್ಟು 1,20,000 ಕಿ.ಮೀ ದೂರ ಅವರು ಸಂಚರಿಸಲಿದ್ದಾರೆ.

ಜನ್ಮಭೂಮಿ ಕರ್ಮಭೂಮಿ:

ಹಗಲಿರುಳು ಗಡಿ ಕಾಯುತ್ತ ಭಾರತವನ್ನು ರಕ್ಷಿಸುತ್ತಿರುವ ನಮ್ಮ ಸೇನೆಯ ಬಗ್ಗೆ ಹೆಮ್ಮೆ ಮೂಡಿಸುವುದು ನನ್ನ ಯಾತ್ರೆಯ ಉದ್ದೇಶ. 'ಜನ್ಮಭೂಮಿ ಕರ್ಮಭೂಮಿ' ಎಂಬ ಹೆಸರಿನಲ್ಲಿ ಈ ದೇಶಪ್ರೇಮ ಯಾತ್ರೆ ಕೈಗೊಂಡಿದ್ದೇನೆ. ಈ ಯಾತ್ರೆಗೆ ಯಾರೂ ಪ್ರಾಯೋಜಕತ್ವ ವಹಿಸಿಲ್ಲ. ಸಂಪೂರ್ಣ ರಾಜಕೀಯೇತರ ಯಾತ್ರೆ ಇದು. ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ, ಅವರಿಗೆ ಸಮರ್ಪಿತವಾದ ಯಾತ್ರೆ ಇದಾಗಿದೆ” ಎಂದು ಜಾಧವ್ ಅವರು ಯಾತ್ರೆಯ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರಿಗೆ ಮಾಹಿತಿ ನೀಡಿದರು.

ಮಾರುತಿ ಕಾರು ಮತ್ತು ಚಿಕ್ಕ ಟ್ರ್ಯಾಲಿ:

ತಮ್ಮ ಯಾತ್ರೆಗೆ ಮಾರುತಿ-800 ಕಾರನ್ನು ಬಳಸಿಕೊಂಡಿದ್ದು, ಯಾತ್ರೆಗೆ ಅಗತ್ಯವಾಗಿ ಆ ಕಾರನ್ನು ರೂಪಾಂತರ ಮಾಡಿಕೊಂಡಿದ್ದಾರೆ. ಆ ಕಾರಿನ ಹಿಂದೆ ಹುತಾತ್ಮ ಯೋಧರ ಸಮಾಧಿ ಮಣ್ಣು ಸಂಗ್ರಹ ಮಾಡಿಟ್ಟುಕೊಳ್ಳಲು ಒಂದು ಟ್ರ್ಯಾಲಿಯನ್ನು ಜೋಡಿಸಿಕೊಂಡಿದ್ದಾರಲ್ಲದೇ, ಆ ಟ್ರ್ಯಾಲಿ ಹಿಂದೆ ಒಂದು ಬೈಕ್ ಮತ್ತು ಒಂದು ಸೈಕಲ್ ಅನ್ನು ಜೋಡಿಸಲಾಗಿದೆ. ಕಾರು ಸಂಚರಿಸಲು ಸಾಧ್ಯವಾಗದ ದಾರಿಯಲ್ಲಿ ಜಾಧವ್ ಅವರು ಈ ಸೈಕಲ್, ಬೈಕ್ ಬಳಸಲಿದ್ದಾರೆ. ಉಪ ಮುಖ್ಯಮಂತ್ರಿಗಳು ಈ ವಾಹನವನ್ನೂ ಕೂಲಂಕಷವಾಗಿ ವೀಕ್ಷಿಸಿದರು.

ನಿಮ್ಮ ದೇಶಪ್ರೇಮಕ್ಕೆ ನನ್ನ ಕೋಟಿ ವಂದನೆಗಳು. ಅನನ್ಯವಾದ ಈ ಯಾತ್ರೆ ದೇಶದ ಉದ್ದಗಲಕ್ಕೂ ನಿರ್ವಿಘ್ನವಾಗಿ ಸಾಗಲಿ. ನಿಮ್ಮ ಯಾತ್ರೆ ಅಖಂಡ ಭಾರತದಲ್ಲಿ ಹೊಸ ಅಲೆ ಎಬ್ಬಿಸಲಿ. ಮುಂದಿನ ತಲೆಮಾರಿಗೆ ನಿಮ್ಮ ದೇಶಪ್ರೇಮ ಯಾತ್ರೆ ಸ್ಫೂರ್ತಿಯಾಗಿ ನಿಲ್ಲಲಿ” ಎಂದು ಹಾರೈಸಿದ ಡಿಸಿಎಂ, ರಸ್ತೆಯ ಕೊನೆ ಅಂಚಿನವರೆಗೂ ಬಂದು ಜಾಧವ್ ಅವರನ್ನು ಬೀಳ್ಕೊಟ್ಟರು.

ABOUT THE AUTHOR

...view details