ಮುಂಬೈ:ಸ್ಥಗಿತಗೊಂಡಿರುವ ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಟಿವಿ ವರದಿಗಾರನೊಬ್ಬನ್ನು ಬಂಧಿಸಲಾಗಿದೆ.
ಮರಾಠಿ ಸುದ್ದಿ ವಾಹಿನಿಯ ವರದಿಗಾರನಾದ ರಾಹುಲ್ ಕುಲಕರ್ಣಿ ಎಂಬಾತನನ್ನು ಜನ ಸಾಮಾನ್ಯರಿಗಾಗಿ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ ಎಂದು ಸುಳ್ಳು ಮಾಹಿತಿಯನ್ನು ನೀಡಿದ್ದಕ್ಕಾಗಿ ಬಂಧಿಸಲಾಗಿದೆ. ಬಂಧಿತ ಪತ್ರಕರ್ತನನ್ನು ಗುರುವಾರ ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಡಿಸಿಪಿ ಅಭಿಷೇಕ್ ತ್ರಿಮುಖೆ ತಿಳಿಸಿದ್ದಾರೆ.
ಮರಾಠವಾಡ ಪ್ರದೇಶದ ಉಸ್ಮಾನಾಬಾದ್‌ನಲ್ಲಿ ರಾಹುಲ್ ಕುಲಕರ್ಣಿಯನ್ನು ಬಂಧಿಸಿ ಮುಂಬೈಗೆ ಕರೆತರಲಾಗಿದೆ. ವದಂತಿ ಹಬ್ಬಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಂಧಿತ ಪತ್ರಕರ್ತನ ಮೇಲೆ ಐಪಿಸಿ ಸೆಕ್ಷನ್ಸ್ 188 , 269, 270 ಮತ್ತು 117ರಡಿ ಪ್ರಕರಣ ದಾಖಲಿಸಲಾಗಿದೆ. ಜನ ಸಾಮಾನ್ಯರು ಮತ್ತು ಕಾರ್ಮಿಕರಿಗಾಗಿ ವಿಶೇಷ ರೈಲು ಪ್ರಾರಂಭಿಸಲಾಗಿದೆ ಎಂದು ರಾಹುಲ್ ಕುಲಕರ್ಣಿ ಸುಳ್ಳು ಸುದ್ದಿಯನ್ನು ನೀಡಿದ್ದ. ಇದನ್ನು ನಂಬಿ ಸುಮಾರು1 ಸಾವಿರಕ್ಕೂ ಹೆಚ್ಚು ಜನರು ಬಾಂದ್ರ ಉಪನಗರದ ರೈಲು ನಿಲ್ದಾಣದ ಬಳಿ ಜಮಾಯಿಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿ ಲಾಕ್ ವಿಸ್ತರಣೆ ಮಾಡಿರುವುದನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ.