ನವದೆಹಲಿ: ಬಂಗಾಳದಲ್ಲಿ ಹೊತ್ತಿಕೊಂಡಿರುವ ಕಿರಿಯ ವೈದ್ಯರ ಮುಷ್ಕರದ ಕಿಚ್ಚು ನವದೆಹಲಿವರೆಗೆ ಹರಡಿದೆ. ದೆಹಲಿ ವೈದ್ಯರು ಬ್ಯಾಂಡೇಡ್ ಹಾಗೂ ಹೆಲ್ಮೆಟ್ ತೊಟ್ಟು ವಿನೂತನವಾಗಿ ಪ್ರತಿಭಟನೆ ಮಾಡ್ತಿದ್ದಾರೆ.
ನವದೆಹಲಿಯ ಪ್ರಸಿದ್ಧ ಏಮ್ಸ್ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ವೈದ್ಯರು ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದು, ನಾಳೆ (ಶುಕ್ರವಾರ)ದಿಂದ ತಾವೂ ಕೆಲಸಕ್ಕೆ ಹಾಜರಾಗಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕಪ್ಪು ಪಟ್ಟಿ ಬದಲಿಗೆ, ರಕ್ತಸಿಕ್ತ ಬ್ಯಾಂಡೇಡ್ ಹಾಗೂ ಕೆಲವರು ಹೆಲ್ಮೆಟ್ ಧರಿಸಿ ವೈದ್ಯರಿಗೆ ರಕ್ಷಣೆ ನೀಡಿ ಎಂದು ಸಾಂಕೇತಿಕವಾಗಿ ಪ್ರತಿಭಟಿಸಿದರು.
ಪಶ್ಚಿಮಬಂಗಾಳದಲ್ಲಿ ಕಿರಿಯ ವೈದ್ಯರೊಬ್ಬರ ಮೇಲೆ ನಡೆದ ಹಲ್ಲೆ ಖಂಡಿಸಿ, ವೈದ್ಯರು ಮುಷ್ಕರ ಹೂಡಿದ್ದಾರೆ. ಇದನ್ನು ಬೆಂಬಲಿಸಿ ಏಮ್ಸ್ನ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (RDA) ಪ್ರತಿಭಟನೆಗೆ ಮುಂದಾಗಿದ್ದು, ದೇಶದ ವೈದ್ಯರೆಲ್ಲ ಬೆಂಬಲಿಸುವಂತೆ ಕರೆ ನೀಡಿದೆ.
ಬಂಗಾಳದಲ್ಲಿ ನಡೆದಿರುವ ಘಟನೆ ಹೇಯ ಕೃತ್ಯ. ವೈದ್ಯರಿಗೆ ರಕ್ಷಣೆ ಹಾಗೂ ನ್ಯಾಯ ನೀಡುವಲ್ಲಿ ಸರ್ಕಾರಗಳು ಸೋತಿವೆ. ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ನಮಗೆ ನೋವಾಗಿದೆ. ಸುರಕ್ಷಿತ ಹಾಗೂ ಅಹಿಂಸೆಯ ವಾತಾವರಣ ವೈದ್ಯರಿಗೆ ಅಗತ್ಯವಿದೆ. ಇದಕ್ಕಾಗಿ ಜೂನ್ 13ರಂದು ಒಂದು ದಿನದ ಪ್ರತಿಭಟನೆ ನಡೆಸಲಾಗ್ತಿದ್ದು, ಜೂನ್ 14ರಂದು ತುರ್ತು ಸೇವೆಗಳ ಹೊರತಾಗಿ ಮತ್ತೆಲ್ಲಾ ಸೇವೆಗಳು ಬಂದ್ ಆಗಿರಲಿವೆ ಎಂದು ಹೇಳಿದೆ.
ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರಧಾನಮಂತ್ರಿಗಳಿಗೆ ತಲುಪಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಗುತ್ತದೆ ಎಂದು ಹೇಳಿದೆ. ದೆಹಲಿ ಮೆಡಿಕಲ್ ಅಸೋಸಿಯೇಷನ್ , ದಾಳಿ ನಡೆದ ಇಂದಿನ (ಗುರುವಾರ) ದಿನವನ್ನು ಕರಾಳ ದಿನವೆಂದು ಘೋಷಿಸಲು ಆಗ್ರಹಿಸಿದೆ.