ಚೆನ್ನೈ:ಬಾಲಾಕೋಟ್ ಉಗ್ರ ನೆಲೆಯನ್ನು ಭಾರತೀಯ ವಾಯುಸೇನೆ ಧ್ವಂಸ ಮಾಡಿದ ಸುಮಾರು ಏಳು ತಿಂಗಳ ಬಳಿಕ ಮತ್ತೆ ಆ ಸ್ಥಳದಲ್ಲಿ ಚಟುವಟಿಕೆ ಆರಂಭವಾಗಿದೆ ಎನ್ನುವ ಗಂಭೀರ ವಿಚಾರವನ್ನು ಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಪಾಕಿಸ್ತಾನ ಕೆಲ ದಿನಗಳ ಹಿಂದೆ ಬಾಲಾಕೋಟ್ ಉಗ್ರನೆಲೆಯನ್ನು ಮತ್ತೆ ಸಕ್ರಿಯಗೊಳಿಸಿದ್ದು, ಸುಮಾರು 500 ಉಗ್ರರು ಭಾರತಕ್ಕೆ ನುಸುಳಲು ಸಿದ್ಧರಾಗಿದ್ದಾರೆ ಎಂದು ಬಿಪಿನ್ ರಾವತ್ ಚೆನ್ನೈನಲ್ಲಿ ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ಪದೇ ಪದೆ ಕದನ ವಿರಾಮ ಉಲ್ಲಂಘಿಸುವ ಮೂಲಕ ಗಡಿಯಲ್ಲಿ ಉಗ್ರರು ಭಾರತವನ್ನು ಪ್ರವೇಶಿಸಲು ಸಹಕಾರ ನೀಡುತ್ತಿದೆ. ಆದರೆ ಭಾರತೀಯ ಸೇನೆ ಎಲ್ಲ ಕೃತ್ಯಗಳನ್ನೂ ಹಿಮ್ಮೆಟ್ಟಿಸಲು ಸಜ್ಜಾಗಿದ್ದು, ಪಾಕಿಸ್ತಾನದ ಪ್ಲಾನ್ ತಲೆಕೆಳಗು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ರಾವತ್ ನುಡಿದಿದ್ದಾರೆ.
ಕಾಶ್ಮೀರದಲ್ಲಿನ ಸಂಪರ್ಕ ಕಡಿತ ಬಗ್ಗೆ ಪ್ರತಿಕ್ರಿಯಿಸಿರುವ ಬಿಪಿನ್ ರಾವತ್, ಕಾಶ್ಮೀರದಲ್ಲಿ ಜನಸಾಮಾನ್ಯರ ನಡುವೆ ಸಂಪರ್ಕದಲ್ಲಿ ಯಾವುದೇ ವ್ಯತ್ಯಯ ಇಲ್ಲ ಆದರೆ ಉಗ್ರರು ಹಾಗೂ ಪಾಕಿಸ್ತಾನದ ನಡುವೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.