ಅಲಿಗಢ್(ಉತ್ತರ ಪ್ರದೇಶ):ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಆಲಿಗಢ್ ಭಜರಂಗದಳ ಕಾರ್ಯಕರ್ತರು ರಸ್ತೆ ಮೇಲೆ ಪಾಕ್ ಧ್ವಜ ಇರಿಸಿ ಪ್ರತಿಭಟಿಸಿದ್ದಾರೆ.
ಪಾಕಿಸ್ತಾನ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ದೇವಾಲಯಗಳ ಮೇಲಿನ ದಾಳಿ ಖಂಡಿಸಿದ್ದಾರೆ. ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ಡಿಸೆಂಬರ್ 30ರಂದು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ಭಾರತದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಅಲಿಗಢ್ ಭಜರಂಗದಳದ ಸಂಚಾಲಕ ಗೌರವ್ ಶರ್ಮಾ ಅವರು ವಿಶ್ವಸಂಸ್ಥೆಯಲ್ಲಿ ಈ ವಿಷಯವನ್ನು ಪ್ರಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.
"ನಾವು ಪಾಕಿಸ್ತಾನದ ಧ್ವಜಗಳನ್ನು ಅಲಿಗಢ್ ಮುಖ್ಯ ರಸ್ತೆಯಲ್ಲಿ ಅಂಟಿಸಿದ್ದೇವೆ. ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ನೆಲಸಮಗೊಳಿಸಿದ ಪ್ರಕರಣಗಳ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆ. ಪಾಕಿಸ್ತಾನದ ಉಗ್ರಗಾಮಿಗಳು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ಥಾಪಿಸುವಂತೆ ನಾವು ಭಾರತ ಸರ್ಕಾರವನ್ನು ಕೋರುತ್ತೇವೆ" ಎಂದು ಶರ್ಮಾ ತಿಳಿಸಿದ್ದಾರೆ.
ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸುರುವ ಘಟನೆ ವಿರುದ್ಧ ಭಾರತವು ಜನವರಿ 1ರಂದು ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಖಂಡಿಸಿತ್ತು. ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಖೈಬರ್ ಪುಖ್ತುನ್ಖ್ವಾ (ಕೆಪಿ) ಸರ್ಕಾರವು ಹಿಂದೂ ದೇವಾಲಯದ ಪುನರ್ ನಿರ್ಮಾದ ಘೋಷಣೆ ಮಾಡಿದ್ದು, ದಾಳಿಕೋರರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ.