ಸ್ಯಾನ್ ಫ್ರಾನ್ಸಿಸ್ಕೋ: ಮಕ್ಕಳ ಪ್ರಾಸ ಪದ್ಯ 'ಬೇಬಿ ಶಾರ್ಕ್' ಗೂಗಲ್ ಒಡೆತನದ ಯೂಟ್ಯೂಬ್‌ನಲ್ಲಿ ಈವರೆಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋ ಎಂಬ ಖ್ಯಾತಿ ಪಡೆದಿದೆ. ಇತ್ತೀಚಿನವರೆಗೂ ಅತಿ ಹೆಚ್ಚು ವೀಕ್ಷಣೆಯೊಂದಿಗೆ ಅಗ್ರಸ್ಥಾನದಲ್ಲಿದ್ದ ಡೆಸ್ಪಾಸಿಟೋ ಸಂಗೀತವನ್ನು 'ಬೇಬಿ ಶಾರ್ಕ್' ಹಿಂದಿಕ್ಕಿದೆ.
ಯೂಟ್ಯೂಬ್ ಮಾಹಿತಿ ಪ್ರಕಾರ, ದಕ್ಷಿಣ ಕೊರಿಯಾದ ಶೈಕ್ಷಣಿಕ ಮನರಂಜನಾ ಕಂಪನಿ ಪಿಂಕ್‌ಫಾಂಗ್ ರೆಕಾರ್ಡ್ ಮಾಡಿದ ಈ ಬೇಬಿ ಶಾರ್ಕ್ ಹಾಡನ್ನು ಈವರೆಗೆ 7.04 ಶತಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 2 ನಿಮಿಷದ ಈ ಹಾಡಿನ ವಿಡಿಯೋದಲ್ಲಿ ನೀರಿನೊಳಗೆ ಕೆಲವು ಅನಿಮೇಟೆಡ್ ಬೇಬಿ ಶಾರ್ಕ್ ಮತ್ತು ಮಕ್ಕಳು 'ಬೇಬಿ ಶಾರ್ಕ್ ಡೂ ಡೂ ಡೂ ಡೂ ಡೂ' ಎಂದು ಹಾಡುವುದನ್ನು ಕಾಣಬಹುದಾಗಿದೆ.
ಯೂಟ್ಯೂಬ್‌ನಲ್ಲಿ ಸದ್ದು ಮಾಡ್ತಿದೆ 'ಬೇಬಿ ಶಾರ್ಕ್' ವಿಡಿಯೋ ಆಕರ್ಷಕ ಮತ್ತು ಸುಮಧುರ ರಾಗವನ್ನು ಹೊಂದಿರುವ ಈ ವರ್ಣರಂಜಿತ ವಿಡಿಯೋವನ್ನು 2016 ರ ಜೂನ್ನಲ್ಲಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ನಂತರ ಅನೇಕ ದೇಶಗಳಲ್ಲಿ ವೈರಲ್ ಆಗಿ ಜನಪ್ರಿಯತೆಯನ್ನು ಕೂಡಾ ಗಳಿಸಿತ್ತು. ಯೂಟ್ಯೂಬ್ ಮತ್ತು ಇತರೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಜನಪ್ರಿಯತೆ ಕಂಡಿದ್ದು, ಕಳೆದ ವರ್ಷ ಬಿಲ್ಬೋರ್ಡ್ ಹಾಟ್ 100ನಲ್ಲಿ ಈ ಹಾಡು 32 ನೇ ಸ್ಥಾನವನ್ನು ಗಳಿಸಿತ್ತು. ಅಷ್ಟೇ ಅಲ್ಲದೆ, ವಾಷಿಂಗ್ಟನ್ ನ್ಯಾಷನಲ್ಸ್ ಬೇಸ್ ಬಾಲ್ ತಂಡ ಈ ಹಾಡನ್ನು ತಮ್ಮ ತಂಡದ ಗೀತೆಯಾಗಿ ತೆಗೆದುಕೊಂಡಿತ್ತು.
ಯೂಟ್ಯೂಬ್ 30 ದಶಲಕ್ಷಕ್ಕೂ ಹೆಚ್ಚಿನ ಸಂಗೀತ ಮತ್ತು ಪ್ರೀಮಿಯಂ ಪಾವತಿಸಿದ ಚಂದಾದಾರರನ್ನು ಹೊಂದಿದೆ ಮತ್ತು 30 ಲಕ್ಷಕ್ಕೂ ಹೆಚ್ಚು ಪಾವತಿ ಚಂದಾದಾರರಿದ್ದಾರೆ. ಸದ್ಯ 'ಬೇಬಿ ಶಾರ್ಕ್' ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋವಾಗಿದೆ.