ನವದೆಹಲಿ: ಶತಮಾನದಷ್ಟು ಹಳೆಯದಾದ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ತೀರ್ಪು ಶನಿವಾರ ಹೊರಬಿದ್ದಿದೆ. ವಿವಾದಿತ ಜಾಗವನ್ನು ಕೇಂದ್ರದ ಅಧೀನಕ್ಕೆ ಒಪ್ಪಿಸಿ ಸುನ್ನಿ ವಕ್ಫ್ ಮಂಡಳಿಗೆ ಹೊರಗಡೆ ಪರ್ಯಾಯ ಜಾಗ ನೀಡುವಂತೆ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದಲ್ಲಿ ಐವರು ಸದಸ್ಯರ ನ್ಯಾಯಪೀಠವು ತನ್ನ ತೀರ್ಪು ನೀಡಿದೆ. ಈ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಬಹುದು. ಆದರೆ, ಮಂದಿರದ ನಿರ್ಮಾಣ ಜವಾಬ್ದಾರಿಯನ್ನು ಟ್ರಸ್ಟ್ಗೆ ವಹಿಸಬೇಕು. ಇದಕ್ಕೂ ಮೊದಲು ಮಂದಿರ ನಿರ್ಮಾಣದ ಸಮಿತಿ ರಚನೆಗೆ ಹಾಗೂ ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ 3 ತಿಂಗಳ ಕಾಲಾವಧಿ ನೀಡಿದೆ.
ನ್ಯಾಯಪೀಠವು ಕೇಂದ್ರ ಅಥವಾ ಉತ್ತರ ಪ್ರದೇಶ ರಾಜ್ಯ ಸರ್ಕಾರ ವಿಶೇಷ ಅಧಿಕಾರ ಬಳಸಿಕೊಂಡು ಅಯೋಧ್ಯೆಯಲ್ಲಿ ಸುನ್ನಿ ವಕ್ಫ್ ಮಂಡಳಿಗೆ 5 ಎಕರೆ ಜಮೀನು ನೀಡಲು ಸೂಚಿಸಿದೆ. ವಿವಾದಿತ ಭೂಮಿ ಕೇಂದ್ರದ ಅಧೀನದಲ್ಲಿ ಇರಲಿದೆ. ವಿವಾದಿತ ಪ್ರದೇಶದ ಒಳಭಾಗದಲ್ಲಿ ಹಿಂದೂಗಳು ಕೂಡಾ ಪೂಜೆ ಸಲ್ಲಿಸಿದ್ದರು. ಇಲ್ಲಿ ಮುಸ್ಲಿಮರಿಂದ ಸತತವಾಗಿ ನಮಾಜ್ ನಡೆಯುತ್ತಲೇ ಬಂದಿದೆ. 1856- 57ಕ್ಕೂ ಮುಂಚೆ ಹಿಂದೂಗಳು ಪೂಜೆ ಮಾಡಲು ಯಾವುದೇ ಅಭ್ಯಂತರ ಇರಲಿಲ್ಲ ಎಂಬುದಕ್ಕೆ ಸಾಕ್ಷ್ಯ ಇದೆ. ಆದರೆ, ಸಾಕ್ಷ್ಯದ ಆಧಾರದ ಮೇಲೆ ಭೂಮಿ ಮಾಲೀಕನನ್ನು ಅಥವಾ ಹಕ್ಕನ್ನು ನಿರ್ಧರಿಸುವುದು ಕಾನೂನಿಗೆ ಸಂಬಂಧಿಸಿದ್ದು ಎಂದು ಹೇಳಿದೆ. ರಾಮ ಅಯೋಧ್ಯೆಯಲ್ಲೇ ಹುಟ್ಟಿರುವುದು ಅವಿವಾದಿತ ಎಂದೂ ಸುಪ್ರೀಂ ಹೇಳಿದೆ.
ಇಲ್ಲಿನ ಕಲಾಕೃತಿಗಳು ಇಸ್ಲಾಮಿಕ್ ಕಲಾ ಶೈಲಿಯನ್ನು ಹೊಂದಿರಲಿಲ್ಲ. ಮಂದಿರ ಒಡೆದು ಮಸೀದಿ ಕಟ್ಟಿದ ಬಗ್ಗೆ ಸಾಕ್ಷ್ಯಗಳೂ ಇಲ್ಲ. ಹಳೆಯ ಕಟ್ಟಡದ ಅಡಿ ವಿಶಾಲವಾದ ರಚನೆಯ ಕಲಾ ಕೃತಿಗಳಿವೆ. ಕಂದಾಯ ದಾಖಲೆ ಪ್ರಕಾರ ಸರ್ಕಾರಿ ಜಮೀನು ಆಗಿದೆ. ಬಾಬ್ರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣ ಆಗಿರಲಿಲ್ಲ ಎಂದು ಕೋರ್ಟ್ ಪುರಾತತ್ವ ಇಲಾಖೆ ಸಾಕ್ಷ್ಯಗಳನ್ನು ಪುರಸ್ಕರಿಸಿದೆ. ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ನಿರ್ಮಾಣಕ್ಕೆ ಬೇರೆಡೆ ಪ್ರತ್ಯೇಕ 5 ಎಕರೆ ಭೂಮಿ ನೀಡಬೇಕು ಎಂದೂ ಆದೇಶಿಸಿದೆ.