ಸುಮಾರು ಏಳು ದಶಕದಿಂದ ಭಾರತದಲ್ಲಿ ಕಗ್ಗಂಟಾಗಿದ್ದ ಅಯೋಧ್ಯ ವಿವಾದಕ್ಕೆ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಯಾರ ಪರವಾಗಿ ತೀರ್ಪು ಬರುತ್ತದೆ ಎಂಬುವ ಕುತೂಹಲದ ನಡುವೆ ಹಲವು ಊಹೆಗಳು ಹಾಗೂ ಆತಂಕಗಳೂ ಭಾರತೀಯರಲ್ಲಿ ಮನೆ ಮಾಡಿವೆ. ತೀರ್ಪು ಯಾರ ಪರವಾಗಿ ಬಂದರೂ ಮುಂದಿನ ಪೀಳಿಗೆಯ ಜನರ ಮೇಲೆ ಹಾಗೂ ರಾಜಕೀಯದ ಮೇಲೆ ದೊಡ್ಡಮಟ್ಟದ ಪರಿಣಾಮಗಳನ್ನು ಬೀರಲಿದೆ ಎಂಬುದು ಅಯೋಧ್ಯ ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್ ಹೇಳುವ ಮಾತು. ಈ ಕುರಿತು ಸುಪ್ರೀಂಕೋರ್ಟ್ಗೆ ಲಿಖಿತ ಟಿಪ್ಪಣಿಯನ್ನು ಕೂಡ ಕೊಟ್ಟಿದ್ದಾರೆ.
ಸಾಮಾಜಿಕ ಹಾಗೂ ರಾಜಕೀಯದಲ್ಲಿ ಕೋಲಾಹಲ ಉಂಟುಮಾಡುವ ತಾಕತ್ತಿರೋ ಈ ತೀರ್ಪಿನ ವಿಚಾರಣೆಗೆ ಸುಪ್ರೀಂಕೋರ್ಟ್ ತೆಗೆದುಕೊಂಡಿದ್ದ ಕಾಲ ಬರೋಬ್ಬರಿ 40 ದಿನಗಳು. ಈ ಸುದೀರ್ಘ ವಿಚಾರಣೆ ನಂತರ ಎಲ್ಲಾ ಸಮುದಾಯಗಳ ವಾದ-ವಿವಾದಗಳನ್ನು ಆಲಿಸಿ ಸುಪ್ರೀಂಕೋರ್ಟ್ ಪ್ರಕಟಿಸಲಿದೆ. ಇನ್ನೊಂದು ವಿಶೇಷತೆ ಅಂದ್ರೆ ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್ ಅವರು ನವೆಂಬರ್ 17ರಂದು ನಿವೃತ್ತರಾಗಲಿದ್ದು, ಆದ್ದರಿಂದ ನಾಳೆ(ಶನಿವಾರ) ಪ್ರಕಟಗೊಳ್ಳಲಿರುವ ಈ ತೀರ್ಪು ತೀವ್ರ ಕುತೂಹಲ ಮೂಡಿಸಿದೆ.
ಧಾರ್ಮಿಕವಾಗಿ ಸಾಕಷ್ಟು ಚರ್ಚೆಗಳಿಗೆ ಹಾಗೂ ವಿವಾದಗಳಿಗೆ ಈ ತೀರ್ಪು ಕಾರಣವಾಗುವ ಅನುಮಾನಗಳೂ ಇದಾವೆ. ಇದೇ ಕಾರಣದಿಂದ ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಯೋಧ್ಯೆ ಇರುವ ಉತ್ತರ ಪ್ರದೇಶದಲ್ಲಿ ಭದ್ರತೆಗಾಗಿ 4000 ಸೈನಿಕರನ್ನು ರವಾನಿಸಿದೆ. ಅಲ್ಲಿನ ಸರ್ಕಾರವೂ ಸುಮ್ಮನೆ ಕುಳಿತಿಲ್ಲ. ಸೂಕ್ಷ್ಮ ಹಾಗೂ ಪ್ರಚೋದನಕಾರಿ ಸ್ಥಳಗಳನ್ನು ಪರಿಶೀಲಿಸಿ ಶಾಂತಿ ಕಾಪಾಡುವ ಸಲುವಾಗಿ 16 ಸಾವಿರ ಸ್ವಯಂ ಸೇವಕರನ್ನು ನೇಮಿಸಿದೆ. ಅಷ್ಟೇ ಅಲ್ಲದೆ ಫೈಜಾಬಾದ್ ಪೊಲೀಸರು ತಮ್ಮ ಜಿಲ್ಲೆಯಲ್ಲಿ ಸ್ವಯಂ ಸೇವಕರನ್ನು ನಿಯೋಜಿಸಿ ಮುನ್ನೆಚ್ಚರಿಕೆ ಕೈಗೊಂಡಿದೆ.
ಈಗಾಗಲೇ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿಗಳು ಬರಬಾರದು ಎಂಬ ಕಾರಣಕ್ಕೆ ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿಯು ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ. ಮೂರು ವಾರಗಳ ಹಿಂದೆಯೇ ಮಸೀದಿ ಉರುಳಿಸುವ ದೃಶ್ಯಗಳನ್ನು ಪ್ರಸಾರ ಮಾಡಬಾರದೆಂದು ಸೂಚಿಸಿದೆ. ಆರ್‌ಎಸ್‌ಎಸ್, ಬಿಜೆಪಿ ಮುಖಂಡರು, ಜಮೈತ್ ಉಲಾಮಾ-ಐ-ಹಿಂದ್ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು ಭಾಗವಹಿಸಿ ನ್ಯಾಯಾಲಯದ ತೀರ್ಪು ಏನೇ ಬಂದರೂ ಅದನ್ನು ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ತೀರ್ಪಿನ ನಂತರ ಅಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗದಂತೆ ತಮ್ಮ ಸಮುದಾಯದವರಿಗೆ ಮನವಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಅಯೋಧ್ಯೆಯ ತೀರ್ಪು ದಶಕಗಳ ಸುದೀರ್ಘ ಭಿನ್ನಾಭಿಪ್ರಾಯಕ್ಕೆ ಅಂತ್ಯ ಹಾಡುತ್ತದೆ ಎಂದು ಹಿಂದೂ ಹಾಗೂ ಮುಸ್ಲಿಂ ಮುಖಂಡರ ಆಶಾವಾದ. ಕರಸೇವಕರು ಬಾಬ್ರಿ ಮಸೀದಿಯನ್ನು ಉರುಳಿಸಿದ ನಂತರ ಆಗಿನ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾಯರು ರಾಷ್ಟ್ರಪತಿ ಸಲಹೆ ಮೇರೆಗೆ ಸುಪ್ರೀಂಕೋರ್ಟ್ಗೆ ಈ ವಿವಾದವನ್ನು ಬಗೆಹರಿಸುವ ಜವಾಬ್ದಾರಿ ವಹಿಸಿದ್ದರು. ಆಗ ಸರ್ಕಾರಕ್ಕೆ ಬೇಕಾಗಿದ್ದು ಬಾಬ್ರಿ ಮಸೀದಿಯನ್ನು 1992ರ ಡಿಸೆಂಬರ್ 6ರಂದು ಕರಸೇವಕರು ಕೆಡವೋದಕ್ಕೆ ಮೊದಲು ಅಲ್ಲಿ ಹಿಂದೂ ದೇವಾಲಯವಿತ್ತೆ ಎಂಬುವ ಪ್ರಶ್ನೆಗೆ ಉತ್ತರ ಮಾತ್ರ. ಆದ್ರೆ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ತೆಗದುಕೊಳ್ಳಲು ಹಿಂದೇಟು ಹಾಕಿತು.