ಅಯೋಧ್ಯಾ: ಬರುವ ಆ.5 ರಂದು ಇಲ್ಲಿನ ರಾಮಲಲ್ಲಾ ಜನ್ಮಸ್ಥಾನ ಕೇಂದ್ರದಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಈ ಮಧ್ಯೆ ಹತ್ತಿರದ ಸರಯೂ ನದಿ ತಟದ ಮಾಝಾ ಬರೇಠಾ ಗ್ರಾಮಸ್ಥರು ಮಾತ್ರ ಈ ಖುಷಿಯನ್ನು ಅನುಭವಿಸಲಾಗದ ಸ್ಥಿತಿಯಲ್ಲಿದ್ದು, ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ಸ್ಥಾನ ಪಲ್ಲಟಗೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುವುದು ಈ ಗ್ರಾಮಸ್ಥರಿಗೆ ಅತ್ಯಂತ ಖುಷಿಯ ವಿಷಯವೇ ಆಗಿದೆ. ಆದರೆ, ರಾಮ ಮಂದಿರ ನಿರ್ಮಾಣವಾಗಲಿರುವ ಸ್ಥಳದಿಂದ 5 ಕಿಮೀ ದೂರದ ಮಾಝಾ ಬರೇಠಾ ಗ್ರಾಮವನ್ನು ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದ್ದು, ನದಿ ತಟದ ಈ ಸ್ಥಳದಲ್ಲಿ ಅತಿ ಎತ್ತರದ ಶ್ರೀರಾಮನ ಮೂರ್ತಿಯನ್ನು ಸ್ಥಾಪಿಸಲು ಮುಂದಾಗಿದೆ. ಈ ವಿಷಯವೇ ಈಗ ಮಾಝಾ ಬರೇಠಾ ಗ್ರಾಮಸ್ಥರ ಚಿಂತೆಗೆ ಕಾರಣವಾಗಿದೆ. ತಲೆಮಾರುಗಳಿಂದ ತಾವು ವಾಸಿಸುತ್ತಿದ್ದ ಮನೆ ಹಾಗೂ ಜಮೀನುಗಳನ್ನು ಕಳೆದುಕೊಳ್ಳುವ ಭೀತಿ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದೊಂದಿಗೆ ಸಂಪೂರ್ಣ ಅಯೋಧ್ಯೆಯ ಸ್ವರೂಪವನ್ನೇ ಬದಲಿಸಲು ಸರ್ಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ. ಇಲ್ಲಿನ ಪರಿಕ್ರಮಾ ಮಾರ್ಗದ ಸೌಂದರ್ಯಕರಣಕ್ಕಾಗಿ 3 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಹಲವಾರು ಸೇತುವೆಗಳನ್ನು ಪರಿಕ್ರಮಾ ಮಾರ್ಗದ ಮಧ್ಯೆ ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೇ ಅಯೋಧ್ಯೆಯಿಂದ ಚಿತ್ರಕೂಟದವರೆಗೆ 165 ಕಿಮೀ ಉದ್ದದ ರಸ್ತೆ ನಿರ್ಮಾಣ ಮಾಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.
ಪ್ರವಾಸೋದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಈ ಪ್ರದೇಶದಲ್ಲಿ ಬೃಹತ್ ಸಾರಿಗೆ ಸಂಪರ್ಕ ವ್ಯವಸ್ಥೆಗಳನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಆಗಸ್ಟ್ 1 ರಂದು ನಡೆಯಲಿರುವ ರಾಮ ಮಂದಿರ ಶಿಲಾನ್ಯಾಸದೊಂದಿಗೆ 1 ಸಾವಿರ ಕೋಟಿ ರೂ. ಮೊತ್ತದ 51 ಯೋಜನೆಗಳಿಗೂ ಶಂಕು ಸ್ಥಾಪನೆ ನೆರವೇರಲಿದೆ.