ನವದೆಹಲಿ:ದೇಶಾದ್ಯಂತ ಸಾಕಷ್ಟು ಕುತೂಹಲ ಮೂಡಿಸಿರುವ ದಶಕಗಳ ಅಯೋಧ್ಯೆ ಭೂವಿವಾದದ ವಿಚಾರಣೆ ಇಂದು ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಖಡಕ್ಕಾಗಿ ಹೇಳಿದ್ದಾರೆ. ಈ ಮೂಲಕ ಹೆಚ್ಚುವರಿ ಸಮಯ ನೀಡಲು ಸಾಧ್ಯವಿಲ್ಲ ಎನ್ನುವ ಸಂದೇಶವನ್ನೂ ರವಾನಿಸಿದ್ದಾರೆ.
ರಾಜಕೀಯ ಹಾಗೂ ಧಾರ್ಮಿಕವಾಗಿ ಸಂಚಲನ ಮೂಡಿಸಿರುವ ರಾಮಜನ್ಮಭೂಮಿಯ ವಿವಾದದ 40 ದಿನದ ವಿಚಾರಣೆ ಆರಂಭವಾಗಿದೆ. ಇಂದು ಸಂಜೆ 5 ಗಂಟೆಗೆ ವಿಚಾರಣೆ ಮುಕ್ತಾಯವಾಗಲಿದ್ದು, ಆ ಬಳಿಕ ತೀರ್ಪಿನ ದಿನಾಂಕವನ್ನು ಮುಖ್ಯ ನ್ಯಾಯಮೂರ್ತಿ ನಿಗದಿ ಮಾಡುವ ಸಾಧ್ಯತೆ ಇದೆ.
ಕೊನೆಯ ದಿನದ ವಿಚಾರಣೆಯಲ್ಲಿ ಆರಂಭದ 45 ನಿಮಿಷ ಹಿಂದೂ ಪರ ವಾದಿಗಳಿಗೆ ಸಮಯ ನೀಡಲಾಗಿದೆ. ನಂತರ ಒಂದು ಗಂಟೆ ಮುಸ್ಲಿಂ ಪರ ವಕೀಲರಿಗೆ ಹಾಗೂ ನಂತರದಲ್ಲಿ ತಲಾ 45 ನಿಮಿಷ ವಿಚಾರಣೆಯಲ್ಲಿ ಭಾಗಿಯಾಗುವ ಎಲ್ಲ ವಕೀಲರಿಗೂ ಸಮಯ ನೀಡಿದ್ದು, ಸಂಜೆ 5 ಗಂಟೆ ಎಲ್ಲವೂ ಮುಕ್ತಾಯವಾಗಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ
ಸೆಪ್ಟೆಂಬರ್ ತಿಂಗಳಲ್ಲಿ ಅ.18ರಂದು ಕೊನೆಯ ದಿನದ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಆ ಬಳಿಕ ಅ.17 ಅಂತಿಮ ದಿನ ಎಂದು ರಂಜನ್ ಗೊಗೊಯಿ ಹೇಳಿದ್ದರು. ಸದ್ಯ ಈ ಎರಡೂ ದಿನಾಂಕಕ್ಕಿಂತಲೂ ಒಂದು ದಿನ ಮುಂಚಿತವಾಗಿಯೇ ದೇಶಾದ್ಯಂತ ಕುತೂಹಲ ಮೂಡಿಸಿರುವ ಪ್ರಕರಣದ ವಿಚಾರಣೆ ಮುಕ್ತಾಯವಾಗಲಿದೆ.