ನವದೆಹಲಿ: ಬೆಂಗಳೂರು ಮೂಲದ ವಿಜ್ಞಾನಿಗಳ ಸಂಸ್ಥೆಯಾದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ (ಐಎಎಸ್), ಆಗಸ್ಟ್ 15ರೊಳಗೆ ಕೊರೊನಾ ವೈರಸ್ ಕೊವ್ಯಾಕ್ಸಿನ್ ಲಸಿಕೆ ಬಿಡುಗಡೆ ಮಾಡುವ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಗುರಿ ಅಸಾಧ್ಯ ಮತ್ತು ಅವಾಸ್ತವಿಕ ಎಂದು ಹೇಳಿದೆ.
ಪ್ರಶ್ನಾತೀತ ತುರ್ತು ಅವಶ್ಯಕತೆ ಇದ್ದರೂ, ಮಾನವರ ಬಳಕೆಗೆ ಲಸಿಕೆ ಅಭಿವೃದ್ಧಿಗೆ ಹಂತ ಹಂತವಾಗಿ ವೈಜ್ಞಾನಿಕ ಪ್ರಾಯೋಗಿಕ ಪರೀಕ್ಷೆಗಳು ಅಗತ್ಯ ಎಂದು ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿದೆ.
ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್ ಜಂಟಿಯಾಗಿ ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸುತ್ತಿವೆ.
ಆಡಳಿತಾತ್ಮಕ ಅನುಮೋದನೆಗಳನ್ನು ತ್ವರಿತಗೊಳಿಸಬಹುದಾದರೂ, ಪ್ರಯೋಗ ಮತ್ತು ದತ್ತಾಂಶ ಸಂಗ್ರಹಣೆಯ ವೈಜ್ಞಾನಿಕ ಪ್ರಕ್ರಿಯೆಗಳು ನೈಸರ್ಗಿಕ ಸಮಯದ ಅವಧಿಯನ್ನು ಹೊಂದಿದ್ದು, ವೈಜ್ಞಾನಿಕ ಕಠಿಣತೆಯ ಮಾನದಂಡಗಳಿಗೆ ಧಕ್ಕೆಯಾಗದಂತೆ ತ್ವರಿತಗೊಳಿಸಲಾಗುವುದಿಲ್ಲ ಎಂದು ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ಅವಸರಿಸುವುದು ಸರಿಯಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಸಾಂಕ್ರಾಮಿಕ ಸಂಭಾವ್ಯ ಕಾಯಿಲೆಗಳಿಗೆ ತ್ವರಿತಗತಿಯ ಲಸಿಕೆ ಅಭಿವೃದ್ಧಿ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ತಿಳಿಸಿದ್ದಾರೆ.