ವಾಘಾ: ಭಾರತದ ಗಡಿಯೊಳಗೆ ನುಗ್ಗಿದ ಪಾಕ್ ವಿಮಾನವನ್ನು ಹೊಡೆದುರುಳಿಸುವ ವೇಳೆ ಆಕಸ್ಮಿಕವಾಗಿ ಪಾಕಿಗಳಿಂದ ಬಂಧಿತರಾದ ವಿಂಗ್ ಕಮ್ಯಾಂಡರ್ ಅಭಿನಂದನ್ ಅವರು ಇಂದು ಭಾರತಕ್ಕೆ ಮರಳಲಿದ್ದಾರೆ.
ಇಂದು ಅತ್ತಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಮರಳಿಲಿರುವ ಅಭಿನಂದನ್ರನ್ನು ಸ್ವಾಗತಿಸಲು ಬೆಳಗ್ಗೆಯಿಂದಲೇ ಜನ ಸೇರಿದ್ದಾರೆ. ಭಾರತದ ಧ್ವಜ, ಅಭಿನಂದನ್ ಭಾವಚಿತ್ರ ಹಿಡಿದ ಜನರ ' ಜೈ ಹೋ ' ಎನ್ನುವ ಕೂಗು ಗಡಿಯಲ್ಲಿ ಮಾರ್ದನಿಸುತ್ತಿದೆ.
ಇಂದು ಮಧ್ಯಾಹ್ಮ 2 ಗಂಟೆ ಸುಮಾರಿಗೆ ಅಭಿನಂದನ್ ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎನ್ನಲಾಗಿದೆ. ಮಗನನ್ನು ಸ್ವಾಗತಿಸಲು ಅಭಿನಂದನ್ ಪೋಷಕರು ಸಹ ಅಮೃತಸರಕ್ಕೆ ಬಂದಿಳಿದಿದ್ದಾರೆ.
ಫೆಬ್ರವರಿ 14ರಂದು ಪುಲ್ವಾಮದಲ್ಲಿ ಜೈಷೆ ಉಗ್ರ ನಡೆಸಿ ಭಯಾನಕ ದಾಳಿಯಲ್ಲಿ 45ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ, ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ, ಜೈಷೆ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಇದರಿಂದ ಕೋಪಗೊಂಡ ಪಾಕ್ ತನ್ನ ವಾಯುಪಡೆಯ ವಿಮಾನವನ್ನು ಭಾರತದ ಗಡಿಯೊಳಗೆ ನುಗ್ಗಿಸಲು ಯತ್ನಿಸಿತ್ತು. ಆದರೆ ಭಾರತದ ವಾಯುಪಡೆ, ಪಾಕ್ನ ವಿಮಾನವನ್ನು ಹೊಡೆದುರುಳಿಸುವಲ್ಲಿ ಯಶ್ವಸ್ವಿಯಾಗಿತ್ತು.
ಆದರೆ, ಆ ಸಮಯದಲ್ಲಿ ವಿಂಗ್ ಕಮ್ಯಾಂಡರ್ ಅಭಿನಂದನ್ ಪಾಕ್ ಸೈನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಅವರನ್ನು ಬಂಧಿಸಿದ ಪಾಕ್, ತನ್ನ ವಶದಲ್ಲಿ ಇಟ್ಟುಕೊಂಡಿತ್ತು. ಅವರ ವಿಡಿಯೋವನ್ನೂ ಬಿಡುಗಡೆ ಮಾಡಿತ್ತು. ಜೀನೇವಾ ಒಪ್ಪಂದದಂತೆ ಅಭಿನಂದನ್ರನ್ನು ಬಂಧಿಸಿದ್ದು ತಪ್ಪು, ಕೂಡಲೇ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಬೇಕು ಎಂದು ಭಾರತ ವಿಶ್ವಮಟ್ಟದಲ್ಲಿ ಒತ್ತಡ ಹಾಕಿತು. ಇದಕ್ಕೆ ಮಣಿದ ಪಾಕ್ ಅಭಿನಂದನ್ರನ್ನು ಇಂದು ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದೆ. ಅವರ ಬರುವಿಕೆಗಾಗಿ ಇಡೀ ದೇಶವೇ ಕಾಯುತ್ತಿದೆ.