ವಿಶಾಖಪಟ್ಟಣಂ: ತಲೆ ಬೋಳಿಸಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪೆಂಡುರ್ತಿ ಮಂಡಲದ ಗಿರಿಪ್ರಸಾದ್ ನಗರದಲ್ಲಿ ನಡೆದಿದೆ.
ಶ್ರೀಕಾಕುಳಂ ಜಿಲ್ಲೆಯಲ್ಲಿ ತನ್ನ ಅಜ್ಜ ತಾಯಿ ಮತ್ತು ಸಹೋದರಿಯೊಂದಿಗೆ ವಾಸವಾಗಿರುವ ದಲಿತ ಯುವಕ ಉದ್ಯೋಗ ಅರಸಿ ವಿಶಾಖಪಟ್ಟಣಂಗೆ ಬಂದಿದ್ದಾನೆ. ಕಳೆದ ನಾಲ್ಕು ತಿಂಗಳಿಂದ ಆಗಸ್ಟ್ 1ರ ವರೆಗೆ ಸಿನಿಮಾ ನಿರ್ಮಾಪಕರೊಬ್ಬರೊಂದಿಗೆ ಕೆಲಸ ಮಾಡಿದ್ದಾನೆ. ಗುರುವಾರ ರಾತ್ರಿ ನಿರ್ಮಾಪಕರ ಪತ್ನಿ ಯುವಕನನ್ನು ಮನೆಗೆ ಕರೆಯಿಸಿ ತಮ್ಮ ಮನೆಯಲ್ಲಾದ ಮೊಬೈಲ್ ಫೋನ್ ಕಳ್ಳತನದ ಆರೋಪವನ್ನು ಈತನ ಮೇಲೆ ಹೊರಿಸಿದ್ದಾರೆ.
ತಲೆ ಬೋಳಿಸಿ ಆಂಧ್ರದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಈ ಬಗ್ಗೆ ಯುವಕ ಪೊಲೀಸರಿಗೆ ದೂರು ನೀಡಿದ್ದಾಗಿ ಸಂಶಯ ವ್ಯಕ್ತಪಡಿಸಿದ ನಿರ್ಮಾಪಕರ ಪತ್ನಿ ಹಾಗೂ ಮನೆಯಲ್ಲಿದ್ದ ಕೆಲ ಸದಸ್ಯರು, ಮತ್ತೆ ಆತನನ್ನು ಕರೆಯಿಸಿಕೊಂಡು ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕ್ಷೌರಿಕನನ್ನು ಕರೆಯಿಸಿ ಯುವಕನ ತಲೆ ಬೋಳಿಸಿ ವಿಕೃತಿ ಮೆರೆದಿದ್ದಾರೆ. ಈ ವಿಚಾರವನ್ನು ಹೊರಗಡೆ ಎಲ್ಲಾದರೂ ಬಾಯಿ ಬಿಟ್ಟರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ಆದರೆ ನೊಂದ ಯುವಕ ತನಗಾದ ಅನ್ಯಾಯವನ್ನು ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದಾನೆ. ಬಳಿಕ ಪೆಂಡುರ್ತಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಸಂತ್ರಸ್ತನಿಂದ ಮಾಹಿತಿ ಪಡೆದಿದ್ದಾರೆ. ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ಮನೀಶ್ ಕುಮಾರ್ ಸಿನ್ಹಾ ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ್ದಾರೆ.