ರೋಹ್ಟಂಗ್ (ಹಿಮಾಚಲ ಪ್ರದೇಶ): ಶನಿವಾರ ಉದ್ಘಾಟನೆಯ ನಂತರ ಹಿಮಾಚಲ ಪ್ರದೇಶದ ರೋಹ್ಟಂಗ್ನಲ್ಲಿರುವ ಅಟಲ್ ಸುರಂಗವನ್ನು ಭಾನುವಾರದಿಂದ ಸಾರ್ವಜನಿಕರಿಗೆ ತೆರೆಯಲಾಗಿದೆ..
ಉದ್ಘಾಟನೆಯ ನಂತರದ ಮೊದಲ ದಿನ 250ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ವಾಹನಗಳು ಸುರಂಗದ ಮೂಲಕ ಸಂಚಾರ ನಡೆಸಿದ್ದು, ಭಾನುವಾರವೂ ಸುರಂಗವನ್ನು ನೋಡಲು ಸಾಕಷ್ಟು ಜನರು ನೆರೆದಿದ್ದರು.
10,040 ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ಸುರಂಗದ ಬಳಿ ಜನರು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಸುರಂಗವನ್ನು ಉದ್ಘಾಟಿಸಿದ ಒಂದು ದಿನದ ನಂತರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಎಲ್ಲಾ ವಾಹನಗಳಿಗೂ ಸುರಂಗದ ಮೂಲಕ ಸಂಚಾರ ನಡೆಸಲು ಅನುಮತಿ ನೀಡಲಾಗಿದೆ. ಆದರೆ ಡೀಸೆಲ್-ಪೆಟ್ರೋಲ್ ತುಂಬಿದ ಟ್ಯಾಂಕರ್‌ಗಳನ್ನು ಸುರಂಗದ ಮೂಲಕ ಹೋಗಲು ಅನುಮತಿಸಲಾಗುವುದಿಲ್ಲ. ಆದರೂ ತುರ್ತು ಪರಿಸ್ಥಿತಿಯಲ್ಲಿ ಬಿಆರ್‌ಒ ಅನುಮತಿ ಪಡೆದ ನಂತರ ಟ್ಯಾಂಕರ್‌ಗಳು ಸುರಂಗದ ಮೂಲಕ ಹಾದು ಹೋಗಬಹುದು.
ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಮುಖ್ಯ ಎಂಜಿನಿಯರ್ ಕೆ.ಪಿ.ಪುರುಷೋತ್ತಮನ್ ಮಾತನಾಡಿ, "ಇದು ಬಿಆರ್‌ಒಗೆ ಮಾತ್ರವಲ್ಲ ಇಡೀ ದೇಶಕ್ಕೆ ಬಹಳ ಹೆಮ್ಮೆಯ ಕ್ಷಣವಾಗಿದೆ. ಕಳೆದ 10 ವರ್ಷಗಳಲ್ಲಿ ಬಿಆರ್‌ಒ ಮಾಡಿದ ಕಠಿಣ ಪರಿಶ್ರಮ ಅಂತಿಮ ಹಂತವನ್ನು ತಲುಪುತ್ತಿದೆ. ಈ ಸುರಂಗ ಆತ್ಮ ನಿರ್ಭರ ಭಾರತದ ಉದಾಹರಣೆ ಎಂದಿದ್ದಾರೆ.