ಮುಂಬೈ: ಕಾಂಗ್ರೆಸಿನ ಹಲವು ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರದ ಕಾಂಗ್ರೆಸಿಗರು ತಮ್ಮ ಸಂಪರ್ಕದಲ್ಲಿದ್ದಾರೆಂದು ಅಲ್ಲಿನ ಸಚಿವರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.
ಮುಂದಿನ ವರ್ಷ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ 50 ಮಂದಿ ಕಾಂಗ್ರೆಸ್ ಹಾಗೂ ಎನ್ಸಿಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಹೇಳಿದ್ದಾರೆ.
ಚುನಾವಣೆ ಹಿನ್ನೆಲೆ ತಮ್ಮ ಪಕ್ಷಗಳಿಂದ ಹೊರಬರಲು ಇಚ್ಛಿಸುತ್ತಿರುವ ಕಾಂಗ್ರೆಸ್ ಹಾಗೂ ಎನ್ಸಿಪಿ ಶಾಸಕರು ಬಿಜೆಪಿ ಸೇರುವುದಾಗಿ ಕೇಳಿಕೊಳ್ಳುತ್ತಿದ್ದಾರೆ. ಎನ್ಸಿಪಿಯಿಂದ ನಾಯಕಿ ಚಿತ್ರಾ ವಾಘಾ ಅವರೇ ಪಕ್ಷದಿಂದ ಹೊರಬಂದಿದ್ದಾರೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳ ಬಲ ಕುಸಿಯಲಿದೆ ಎಂದು ಮಹಾಜನ್ ಭವಿಷ್ಯ ನುಡಿದಿದ್ದಾರೆ.
ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಹಾಗೂ ಎನ್ಸಿಪಿ ನಾಯಕರನ್ನು ಬಿಜೆಪಿ ಹೆದರಿಸುತ್ತಿದೆ ಎಂಬ ಶರದ್ ಪವಾರ್ ಹೇಳಿಕೆಯನ್ನು ಅವರು ಮಹಾಜನ್ ಅಲ್ಲಗಳೆದಿದ್ದಾರೆ.
ಚಿತ್ರಾ ವಾಘಾ ಅವರೊಂದಿಗೆ ನವಿ ಮುಂಬೈನ ಮುನ್ಸಿಪಲ್ ಕಾರ್ಪೊರೇಷನ್ನ ಸಂದೀಪ್ ನಾಯ್ಕ ಸೇರಿದಂತೆ ಹಲವು ಕಾರ್ಪೊರೇಟರ್ಗಳು ಸಹ ಬಿಜೆಪಿ ಸೇರಲಿದ್ದಾರೆ ಎಂದು ಸುದ್ದಿ ಸಹ ಹರಿದಾಡುತ್ತಿದೆ.