ಜಾನ್ಪುರ್: ಮತದಾನ ಪ್ರತಿಯೊಬ್ಬರ ಹಕ್ಕು. ಮತ ಚಲಾವಣೆ ಎಲ್ಲರ ಕರ್ತವ್ಯ. ಹೀಗೆ ಹೇಳುತ್ತಲೇ ಇದ್ದೇವೆ. ಆದರೆ ಚುನಾವಣೆ ದಿನ ಮತಗಟ್ಟೆಗಳತ್ತ ಹೋಗಲು ಹಿಂದೇಟು ಹಾಕುವವರೇ ಹೆಚ್ಚು. ಆದ್ರೆ 110 ವರ್ಷದ ಈ ಶತಾಯಿಷಿ ಅಜ್ಜಿ ಈ ವಯಸ್ಸಲ್ಲೂ ಹಕ್ಕು ಚಲಾಯಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಉತ್ತರ ಪ್ರದೇಶದ ಜಾನ್ಪುರ್ ಜಿಲ್ಲೆಯ ಈ ವೃದ್ಧೆಯ ಹೆಸರು ಮಹಾರಾಣಿ ದೇವಿ. ವಯಸ್ಸು 110. ಜಿಲ್ಲೆಯಲ್ಲಿ ಇವರನ್ನು ಅತೀ ಹಿರಿಯ ಮತದಾರರೆಂದು ಗುರುತಿಸಲಾಗಿದೆ. ಸ್ವಾತಂತ್ರ್ಯ ನಂತರ ನಡೆದ ಚುನಾವಣೆಗಳಲ್ಲಿ ಈ ಅಜ್ಜಿ ಒಮ್ಮೆಯೂ ಮತದಾನ ಮಾಡುವುದನ್ನು ತಪ್ಪಿಸಿಲ್ಲ. ಅಷ್ಟೇ ಏಕೆ 110ನೇ ವಯಸ್ಸಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವೋಟ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.