ಗುವಾಹಟಿ: ಕಳೆದ 24 ಗಂಟೆಗಳಲ್ಲಿ ಅಸ್ಸೋಂನಲ್ಲಿ ಎಂಟು ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಹೊಸ ಪ್ರಕರಣಗಳು ಸೇರಿ ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 56ಕ್ಕೇರಿದೆ.
ಅಸ್ಸೋಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಗುವಾಹಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ಭೇಟಿ ನೀಡಿದರು. ರಾಜ್ಯದ ಒಟ್ಟು 56 ಪ್ರಕರಣಗಳಲ್ಲಿ 21 ಆಕ್ಟೀವ್ ಪ್ರಕರಣಗಳು, 34 ಡಿಸ್ಚಾರ್ಜ್ ಮತ್ತು 1 ಸಾವು ಆಗಿದೆ. ಹಾಗಾಗಿ ಮುಂದಿನ ಕೆಲವು ದಿನಗಳವರೆಗೆ ಹೊಸ ರೋಗಿಗಳಿಗಾಗಿ ಎರಡು ವೈದ್ಯಕೀಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಮುಚ್ಚಬೇಕಾಗಿ ಸರ್ಕಾರ ಆದೇಶ ಹೊರಡಿಸಿದೆ ಎಂದರು.
ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪಿಜಿ ವಿದ್ಯಾರ್ಥಿಯೊಬ್ಬರಿಗೆ ಕಳೆದ ರಾತ್ರಿ ಕೊರೊನಾ ಪಾಸಿಟಿವ್ ಬಂದಿದೆ. ಇದರ ಪರಿಣಾಮವಾಗಿ, ಅವರೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರನ್ನು ನಾವು ಪರೀಕ್ಷಿಸಬೇಕು ಮತ್ತು ಇಡಿ ಜಿಎಂಸಿಎಚ್ ಆವರಣವನ್ನು ಸ್ವಚ್ಚಗೊಳಿಸಬೇಕು, ಎಂದು ಶರ್ಮಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಜಿಎಂಸಿಎಚ್‌ನ ಪಿಜಿ ವಿದ್ಯಾರ್ಥಿಯ ಕೊರೊನಾ ಪಾಸಿಟಿವ್ ಬಂದ ಬಳಿಕ ಅಸ್ಸೊಂ ಸರ್ಕಾರ ಜಿಎಂಸಿಎಚ್ ಅಧೀಕ್ಷಕ ಡಾ. ರಾಮೆನ್ ತಾಲ್ಲೂಕ್ದರ್ ಮತ್ತು ಇತರ ಒಂಬತ್ತು ವೈದ್ಯರನ್ನು ಕ್ವಾರಂಟೈನ್ಗೆ ಕಳುಹಿಸಿದೆ. ಬಳಿಕ ಜಿಎಂಸಿಎಚ್‌ನ ಹಾಸ್ಟೆಲ್ ಸಂಖ್ಯೆ 1 ಮತ್ತು 5 ಅನ್ನು ಸರ್ಕಾರವು ಕಂಟೇನ್ಮೆಂಟ್ ವಲಯ ಎಂದು ಘೋಷಿಸಿದೆ.
ಅಸ್ಸೋಂನ 8 ಹೊಸ ಕೊರೊನಾ ಪ್ರಕರಣಗಳಲ್ಲಿ ಗುವಾಹಟಿ ಮತ್ತು ಸಿಲ್ಚಾರ್ನಲ್ಲಿ ತಲಾ ನಾಲ್ಕು ಪ್ರಕರಣ ವರದಿಯಾಗಿದೆ.