ಗುವಾಹಟಿ: ಅಸ್ಸೋಂನಲ್ಲಿ ಬಿಡದೆ ಸುರಿಯುತ್ತಿರುವ ಭಾರಿ ಮಳೆ ಪ್ರವಾಹ ಪರಿಸ್ಥಿತಿ ತಂದಿಟ್ಟಿದ್ದು, ಈವರೆಗೆ ಐವರು ಸಾವನ್ನಪ್ಪಿದ್ದಾರೆ. ಸುಮಾರು ನಾಲ್ಕು ಲಕ್ಷ ಜನರ ಬದುಕು ಬೀದಿಪಾಲಾಗಿದೆ.
ಅಸ್ಸೋಂನಲ್ಲಿ ಪ್ರವಾಹಕ್ಕೆ ಐವರು ಬಲಿ: ಸಂಕಷ್ಟದಲ್ಲಿ ನಾಲ್ಕು ಲಕ್ಷ ಜನ! - ಗುವಾಹಟಿ
ಕಳೆದ 24 ಗಂಟೆಗಳಲ್ಲಿ ಅಸ್ಸೋಂ ಪ್ರವಾಹದಲ್ಲಿ ಮತ್ತಿಬ್ಬರು ಮೃತಪಟ್ಟಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಗೋಲ್ಪರ ಹಾಗೂ ಹೊಜೈ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಏಳು ಜಿಲ್ಲೆಗಳ 350 ಗ್ರಾಮಗಳಲ್ಲಿನ 3,81,320 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿದ್ದು, 21 ಸಾವಿರ ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಇವರನ್ನು 190 ಪರಿಹಾರ ಕೇಂದ್ರಗಳಿಗೆ ಜಿಲ್ಲಾಡಳಿತ ಕಳುಹಿಸಿದೆ. ದಾರಂಗ್ ಜಿಲ್ಲೆಯ ಒರಾಂಗ್ ರಾಷ್ಟ್ರೀಯ ಉದ್ಯಾನವನದೊಳಗೆ ಸಹ ನೀರು ನುಗ್ಗಿ ಹಾನಿಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.