ಅಸ್ಸೋಂ:ಕಳೆದ ಕೆಲ ದಿನಗಳಿಂದ ಅಸ್ಸೋಂನಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಉಂಟಾಗಿರುವ ಪ್ರವಾಹದ ಪರಿಣಾಮ ಈಗಾಗಲೇ 37 ಜನ ಸಾವಿಗೀಡಾಗಿದ್ದಾರೆ. ರಾಜ್ಯದ 18 ಜಿಲ್ಲೆಗಳ 1,327 ಗ್ರಾಮಗಳು ಮುಳುಗಡೆಯಾಗಿವೆ.
ರಾಜ್ಯದಲ್ಲಿ 10,09,089 ಜನರು ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿದ್ದಾರೆ. 1,68.210.28 ಹೆಕ್ಟೇರ್ ಕೃಷಿ ಭೂಮಿಯು ಸಂಪೂರ್ಣ ನೀರಿನಿಂದ ಆವೃತ್ತವಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಧೆಮಾಜಿ, ಬಿಸ್ವಾನಾಥ್, ಕೊಕ್ರಜಾರ್, ದಾರಂಗ್, ನಲ್ಬಾರಿ, ಬಾರ್ಪೆಟಾ, ಬೊಂಗೈಗಾಂವ್, ಚಿರಾಂಗ್, ಧುಬ್ರಿ, ದಕ್ಷಿಣ ಸಲ್ಮಾರಾ, ಗೋಲಾಪರಾ, ಕಮ್ರೂಪ್, ಕಮ್ರೂಪ್ ಮೆಟ್ರೋ, ಮೊರಿಗಾಂವ್, ನಾಗಾನ್, ಗೋಲಘಾಟ್, ಶಿವಸಾಗರ ಮತ್ತು ಟಿನ್ಸುಕಿಯಾಗರ್ ಜಿಲ್ಲೆಗಳ ಪರಿಸ್ಥಿತಿ ಹೇಳತೀರದಾಗಿದೆ. ಈ ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳು 323 ಪರಿಹಾರ ಶಿಬಿರಗಳನ್ನು ತೆರೆದಿದ್ದು, ಭಾನುವಾರ ಬೆಳಗ್ಗಿನವರೆಗೆ ಒಟ್ಟು 65,884 ಜನರು ಆಶ್ರಯ ಪಡೆದಿದ್ದಾರೆ.
ಬ್ರಹ್ಮಪುತ್ರ, ಜಿಯಾ ಭಾರಲಿ, ಪಾಗ್ಲಾಡಿಯಾ, ಕೋಪಿಲಿ ಸೇರಿದಂತೆ ಹಲವಾರು ನದಿಗಳು ರಾಜ್ಯದ ವಿವಿಧ ಸ್ಥಳಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಕೇಂದ್ರ ಜಲ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.