ನವದೆಹಲಿ: ಚಂದ್ರಯಾನ-2 ಮಂಗಳವಾರ ಮಹತ್ವದ ಘಟ್ಟ ತಲುಪಲಿದೆ. ಆ.14ರಂದು ಭೂಕಕ್ಷೆಯ ಸಂಪರ್ಕ ಕಡಿದುಕೊಂಡು, ಚಂದ್ರನತ್ತ ಮುಖ ಮಾಡಿರುವ ಚಂದ್ರಯಾನ ನೌಕೆಯನ್ನು ಇಸ್ರೋ ವಿಜ್ಞಾನಿಗಳು ಇಂದು ಚಂದ್ರನ ಕಕ್ಷೆಗೆ ಸೇರ್ಪಡೆ ಮಾಡಲಿದ್ದಾರೆ.
ದ್ರವರೂಪದ ಎಂಜಿನ್ಅನ್ನು ಕೆಲಹೊತ್ತು ದಹಿಸಿ, ಇಂದು ಬೆಳಗ್ಗೆ 8.30ರಿಂದ 9.30ರ ಅವಧಿಯಲ್ಲಿ ವಿಜ್ಞಾನಿಗಳು ಕಕ್ಷೆಗೆ ಸೇರಿಸಲಿದ್ದಾರೆ. ಚಂದ್ರಯಾನ ನೌಕೆ ಯಶಸ್ವಿಯಾಗಿ ಕಕ್ಷೆಗೆ ಸೇರಿದರೆ ಚಂದಿರನ ಪರಿಭ್ರಮಣೆ ಆರಂಭಿಸಲಿದೆ.
ಒಟ್ಟು 13 ದಿನಗಳ ಕಾಲ ಪರಿಭ್ರಮಣೆ ನಡೆದು ಚಂದಿರನ ಸಮೀಪಕ್ಕೆ ನೌಕೆ ಹೋಗಲಿದೆ. ಬಳಿಕ ‘ಪ್ರಜ್ಞಾನ್’ ಎಂಬ ರೋವರ್ ಒಳಗೊಂಡಿರುವ ‘ವಿಕ್ರಮ್’ ಎಂಬ ಲ್ಯಾಂಡರ್ ಚಂದ್ರಯಾನ ನೌಕೆಯ ಮತ್ತೊಂದು ಸಾಧನ ಆರ್ಬಿಟರ್‌ನಿಂದ ಬೇರ್ಪಡಲಿದೆ. ಮೂರ್ನಾಲ್ಕು ದಿನ ಚಂದ್ರನ ಕಕ್ಷೆಯನ್ನು ಸುತ್ತಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರ್ ಇಳಿಯಲಿದೆ.
ತಾಂತ್ರಿಕ ದೋಷದ ಪರಿಣಾಮ ಉಡಾವಣೆ ಒಂದು ವಾರ ಮುಂದೂಡಿಕೆಯಾಗಿ, ಜು. 22ರಂದು ಚಂದ್ರಯಾನ-2 ನೌಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿತ್ತು.
ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸುರಕ್ಷಿತವಾಗಿ ಇಳಿಸುವ ಪ್ರಯತ್ನಕ್ಕೆ ಇಸ್ರೋ ವಿಜ್ಞಾನಿಗಳು ಕೈ ಹಾಕಿದ್ದು, ವಿಶೇಷವೆಂದರೆ ಇಲ್ಲಿಯವರೆಗೆ ಯಾವ ದೇಶವೂ ಸಹ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿಲ್ಲ. ಈ ಕಾರಣದಿಂದ ಇಸ್ರೋ ಚಂದ್ರಯಾನ-2 ಜಾಗತಿಕಮಟ್ಟದಲ್ಲಿ ಗಮನ ಸೆಳೆದಿದೆ.