ನವದೆಹಲಿ:ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಮತ್ತೊಮ್ಮೆ ಭರ್ಜರಿ ಗೆಲುವು ದಾಖಲು ಮಾಡಿದ್ದು, ಅರವಿಂದ್ ಕೇಜ್ರಿವಾಲ್ ಹ್ಯಾಟ್ರಿಕ್ ಗೆಲುವು ದಾಖಲು ಮಾಡುವ ಮೂಲಕ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡಲು ಸಜ್ಜಾಗಿದ್ದಾರೆ.
ಕೇಜ್ರಿ ಹ್ಯಾಟ್ರಿಕ್ ಗೆಲುವು... ಫೆ.16ರಂದು ಮುಖ್ಯಮಂತ್ರಿಯಾಗಿ ಪದಗ್ರಹಣ! - ದೆಹಲಿ ವಿಧಾನಸಭೆ
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡಲು ಸನ್ನದ್ಧವಾಗಿದೆ. ಬರುವ ಭಾನುವಾರ ರಾಷ್ಟ್ರರಾಜಧಾನಿ ಸಿಎಂ ಆಗಿ ಮತ್ತೊಂದು ಅವಧಿಗೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಇಂದು ಬೆಳಗ್ಗೆ ಲೆಫ್ಟಿನೆಂಟ್ ಗವರ್ನರ್ ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಕೇಜ್ರಿವಾಲ್ ಸಮಯಾವಕಾಶ ಕೇಳಿದ್ದು, ಅದರ ಪ್ರಕಾರ ಫೆಬ್ರವರಿ 16ರಂದು ರಾಮಲೀಲಾ ಮೈದಾನದಲ್ಲಿ ಕೇಜ್ರಿವಾಲ್ ಸಿಎಂ ಆಗಿ ಮತ್ತೊಂದು ಅವಧಿಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಇಂದು ಮಧ್ಯಾಹ್ನ ಕೇಜ್ರಿವಾಲ್ ಮನೆಯಲ್ಲಿ ಹೊಸದಾಗಿ ಶಾಸಕರಾಗಿ ಆಯ್ಕೆಗೊಂಡಿರುವ ಎಎಪಿ ಶಾಸಕರೊಂದಿಗೆ ಸಭೆ ನಡೆಯಲಿದ್ದು, ಈ ವೇಳೆ, ನೂತನ ಶಾಸಕಾಂಗ ಪಕ್ಷದ ಅಭ್ಯರ್ಥಿಯ ಆಯ್ಕೆ ನಡೆಯಲಿದೆ. 70 ಕ್ಷೇತ್ರಗಳ ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 62 ಸ್ಥಾನ ಹಾಗೂ ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿವೆ. ಕಾಂಗ್ರೆಸ್ ಯಾವುದೇ ಸ್ಥಾನದಲ್ಲೂ ಗೆಲುವು ಸಾಧನೆ ಮಾಡದೇ ಮುಖಭಂಗಕ್ಕೊಳಗಾಗಿದೆ.