ನವದೆಹಲಿ: ಮಾಜಿ ಕೇಂದ್ರ ಸಚಿವ, ಮೋದಿ ಸರ್ಕಾರದ ಟ್ರಬಲ್ ಶೂಟರ್ ಅರುಣ್ ಜೇಟ್ಲಿ (66) ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ತಿಂಗಳಿಂದ ತೀವ್ರ ಅನಾರೋಗ್ಯದ ಸಮಸ್ಯೆಗೆ ಒಳಗಾಗಿದ್ದ ಅವರನ್ನ ಉಸಿರಾಟದ ತೊಂದರೆ ಇದ್ದ ಕಾರಣ ಆಗಸ್ಟ್ 8ರ ಬೆಳಗ್ಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಅರುಣ್ ಜೇಟ್ಲಿ ಮೂಲತಃ ವಕೀಲರಾಗಿದ್ದು, ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿ ಕೆಲಸ ಮಾಡಿದ್ದರು. ಜತೆಗೆ ಮೋದಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಕರೆಸಿಕೊಂಡಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಎನ್ಡಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಇವರು, ನೋಟ್ ಬ್ಯಾನ್, ಜಿಎಸ್ಟಿಯಂತಹ ಮಹತ್ವದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಅನಾರೋಗ್ಯದಿಂದ ಸಚಿವ ಪದವಿ ತ್ಯಜಿಸಿದ್ದ ಜೇಟ್ಲಿ:
ಅನಾರೋಗ್ಯದ ಕಾರಣ 2019ರ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದ ಅರುಣ್ ಜೇಟ್ಲಿ, ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಂಡಿದ್ದರು. ಇನ್ನು ಕೇಂದ್ರದಲ್ಲಿ ಮೋದಿ 2.0 ಸರ್ಕಾರ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯುತ್ತಿದ್ದಂತೆ ತಮಗೆ ಯಾವುದೇ ರೀತಿಯ ಜವಾಬ್ದಾರಿ ನೀಡದಂತೆ ಮೋದಿ ಬಳಿ ಮನವಿ ಮಾಡಿಕೊಂಡಿದ್ದರು.
2018 ರಿಂದಲೇ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದಿದ್ದ ಟ್ರಬಲ್ ಶೂಟರ್:
2019ರ ಜನವರಿಯಲ್ಲಿ ಜೇಟ್ಲಿ ಅಮೆರಿಕಾದಲ್ಲಿ ಎಡಗಾಲಿನಲ್ಲಿ ಆಗಿದ್ದ ಸಾಫ್ಟ್ ಟಿಶ್ಯು ಕ್ಯಾನ್ಸರ್ ಆಪರೇಷನ್ಗೆ ಒಳಗಾಗಿದ್ದರು. ಇದಕ್ಕೂ ಮೊದಲು 2018ರ ಮೇ 14ರಂದು ಜೇಟ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಬಾಲ್ಯ ಜೀವನ:
ಅರುಣ್ ಜೇಟ್ಲಿ ಕಿಶನ್ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಗಳ ಮಗನಾಗಿ ಡಿಸೆಂಬರ್ 28, 1952ರಲ್ಲಿ ದೆಹಲಿಯಲ್ಲಿ ಜನಿಸುತ್ತಾರೆ. 1973ರಲ್ಲಿ ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ವಾಣಿಜ್ಯ ಪದವಿಯನ್ನು ಪಡೆದುಕೊಂಡರು. 1977ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿಯನ್ನು ಪಡೆದುಕೊಂಡರು. ವಿದ್ಯಾರ್ಥಿ ಜೀವನದಲ್ಲೇ ಅನೇಕ ಸಾಧನೆ ಮಾಡಿ ಪ್ರಶಸ್ತಿಗಳಿಸಿದ್ದ ಇವರು, 1978ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.
ವಿದ್ಯಾರ್ಥಿ ಸಂಘದ ನಾಯಕನಾಗಿರಾಜಕೀಯ ವೃತ್ತಿ ಜೀವನ