ನವದೆಹಲಿ:ಕಳೆದ ಕೆಲ ದಿನಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಗ್ಯ ಮತ್ತಷ್ಟು ಗಂಭೀರವಾಗಿದ್ದು, ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಗಸ್ಟ್ 9ರಿಂದ ಅರುಣ್ ಜೇಟ್ಲಿ ಏಮ್ಸ್ನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇದೀಗ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಉಲ್ಭಣಗೊಂಡಿದೆ. ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿರುವ ಅವರಿಗೆ ಕೃತಕ ಉಸಿರಾಟದ ಸಾಧನ ಅಳವಡಿಸಲಾಗಿದೆ.
ಜೇಟ್ಲಿ ಆರೋಗ್ಯ ಮತ್ತಷ್ಟು ಗಂಭೀರ: ಕೃತಕ ಉಸಿರಾಟ ವ್ಯವಸ್ಥೆ ಈ ಬೆನ್ನಲ್ಲೇ ಏಮ್ಸ್ ಆಸ್ಪತ್ರೆಗೆ ಗಣ್ಯಾತಿಗಣ್ಯರು ಧಾವಿಸುತ್ತಿದ್ದು, ಇಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್, ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಭೇಟಿ ನೀಡಿ ಆರೋಗ್ಯದ ಮಾಹಿತಿ ಪಡೆದುಕೊಂಡಿದ್ದಾರೆ.
ಕಳೆದ ರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದರು.
2019ರ ಜನವರಿಯಲ್ಲಿ ಜೇಟ್ಲಿ ಅಮೆರಿಕಗೆ ತೆರಳಿದ ಜೇಟ್ಲಿ ಎಡಗಾಲಿನ ಸಾಫ್ಟ್ ಟಿಶ್ಯು ಕ್ಯಾನ್ಸರ್ ಸಂಬಂಧ ಆಪರೇಷನ್ಗೆ ಒಳಗಾಗಿದ್ದರು. 2018ರ ಮೇ 14ರಂದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು.