ನವದೆಹಲಿ: ಜಗತ್ತಿನಲ್ಲಿ ಅತಿ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಕಾಯಿಲೆಯಿಂದಾಗಿ ವಿಶ್ವಾದ್ಯಂತ ಜನತೆ ಭೀತಿಗೊಳಗಾಗಿದ್ದು, ಒಂದು ರೀತಿಯ ಅಸಹಾಯಕತೆಯ ಭಾವನೆ ಅವರನ್ನು ಕಾಡುತ್ತಿದೆ. ನಿರೀಕ್ಷೆಗೂ ಮೀರಿ ಅಪಾಯಕಾರಿಯಾಗಿ ಹರಡುತ್ತಿರುವ ವೈರಸ್ ಕಾರಣದಿಂದ ಜನ ಅನಿವಾರ್ಯವಾಗಿ ತಮ್ಮ ದಿನನಿತ್ಯದ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವಂತಾಗಿದೆ ಹಾಗೂ ಅದೆಷ್ಟೋ ಅಗತ್ಯ ಕೆಲಸಗಳನ್ನು ಮಾಡದೆ ಸುಮ್ಮನಿರುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಕೊರೊನಾ ವೈರಸ್ ಬರದಂತೆ ತಡೆಯುವ ಸುರಕ್ಷಿತ ವ್ಯಾಕ್ಸಿನ್ ಈಗ ಅತಿ ತುರ್ತಾಗಿ ವಿಶ್ವಕ್ಕೆ ಬೇಕಾಗಿದೆ.
ವ್ಯಾಕ್ಸಿನ್ ಬರುವವರೆಗಾದರೂ ನಾವೆಲ್ಲ ಜಾಗರೂಕರಾಗಿ, ಸುರಕ್ಷತೆಯನ್ನು ಕಾಪಾಡಿಕೊಳ್ಳಲೇಬೇಕಿದೆ. ಆದರೆ ಈ ವಿಚಿತ್ರ ವೈರಸ್ನ ಹರಡುವಿಕೆಯ ವಿಧಾನ ಹಾಗೂ ಇದನ್ನು ಗುಣಪಡಿಸಲು ಬೇಕಾದ ಔಷಧಿಗಳ ಬಗ್ಗೆಯೇ ಇನ್ನೂ ಗೊಂದಲ ಇರುವುದರಿಂದ ಮನುಷ್ಯರ ಸ್ಥಿತಿ ಅಯೋಮಯವಾಗಿದೆ.
ಇಂಥ ಪರಿಸ್ಥಿತಿಗಳಲ್ಲಿ ಮಾನವ ಕುಲಕ್ಕೆ ಆಶಾದಾಯಕವಾಗಿ ಕಾಣುತ್ತಿರುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಹಾಗೂ ಮಶೀನ್ ಲರ್ನಿಂಗ್ ತಂತ್ರಜ್ಞಾನ. ಧ್ವನಿ ಗುರುತಿಸುವ ತಂತ್ರಜ್ಞಾನ, ಡೇಟಾ ಅನಲಿಟಿಕ್ಸ್, ಮಶೀನ್ ಲರ್ನಿಂಗ್, ಡೀಪ್ ಲರ್ನಿಂಗ್, ಚಾಟ್ ಬಾಟ್ ತಂತ್ರಜ್ಞಾನ ಅಭಿವೃದ್ಧಿ ಮತ್ತು ಫೇಸ್ ರಿಕಗ್ನಿಷನ್ (ಮುಖ ಗುರುತು ಪತ್ತೆ) ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಆವಿಷ್ಕಾರಗಳ ಕಾರಣದಿಂದ ಕೋವಿಡ್-19ನ ಬಿಕ್ಕಟ್ಟಿನ ಸಮಯದಲ್ಲಿ ಸಾಕಷ್ಟು ಸಹಾಯವಾಗುತ್ತಿದೆ. ದೂರದಿಂದಲೇ ರೋಗ ಪತ್ತೆ ಮಾಡುವಿಕೆ, ಔಷಧಿ ನೀಡುವಿಕೆ ಸೇರಿದಂತೆ ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲು (ಕಾಂಟ್ಯಾಕ್ಟ್ ಟ್ರೇಸಿಂಗ್) ಮತ್ತು ವ್ಯಾಕ್ಸಿನ್ ಅಭಿವೃದ್ಧಿಪಡಿಸಲು ಈ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲು ಜಗತ್ತಿನ ಹಲವಾರು ಪ್ರಯೋಗಾಲಯಗಳು ಈಗ ಮುಂದಾಗಿವೆ.