ನವದೆಹಲಿ: ರಾತ್ರಿ ವೇಳೆ ಕಾರ್ಯಾಚರಣೆ ಮಾಡಬಲ್ಲ ಐಸಿವಿ (ಇನ್ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್ಸ್) ಅನ್ನು ತಯಾರಿಸಲು ಭಾರತೀಯ ಸೇನೆ ಮುಂದಾಗಿದ್ದು, ಪೂರ್ವ ಲಡಾಖ್ನ ಚೀನಾ-ಭಾರತ ಗಡಿಯಲ್ಲಿ ಉದ್ವಿಗ್ನತೆ ಇರುವ ಈ ಸಮಯದಲ್ಲಿ ಪ್ರಭಾವ ಬೀರಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈಗಾಗಲೇ ಭಾರತೀಯ ಸೇನೆ ಆಸಕ್ತಿ ಇರುವ ಕಂಪನಿಗಳಿಂದ ಅರ್ಜಿ ಆಹ್ವಾನಿಸಿದ್ದು, ಪ್ರಕ್ರಿಯೆ ಮುಂದುವರೆದಿದೆ. ಬಿಎಂಪಿ/2ಕೆ ವಾಹನಗಳ ಮಾದರಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗುತ್ತದೆ.
ಬಿಎಂಪಿ/2ಕೆ ವಾಹನಗಳನ್ನು ಮೊದಲ ಬಾರಿಗೆ 1985ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಈ ವಾಹನಗಳು ಸೇನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಗಡಿಭಾಗಗಳಲ್ಲಿ ಬೆದರಿಕೆಯನ್ನು ತಪ್ಪಿಸುವ ಸಲುವಾಗಿ ವಾಹನಗಳನ್ನು ತಯಾರಿಸಲಾಗುತ್ತದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಈ ವಾಹನದಲ್ಲಿ ಇಮೇಜ್ ಇನ್ಟೆಂಸಿಫೈಯರ್ ಟೆಕ್ನಾಲಜಿ ಇರಲಿದ್ದು, ಹಗಲು ಮತ್ತು ರಾತ್ರಿಯ ವೇಳೆ ವಾಹನಗಳು ಕಾರ್ಯಾಚರಣೆ ಮಾಡಲು ಅನುಕೂಲ ಮಾಡಿಕೊಡಲಿದೆ.
ಸದ್ಯಕ್ಕೆ ಲಡಾಖ್ನ ಚೀನಾ ಹಾಗೂ ಭಾರತದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಎರಡೂ ರಾಷ್ಟ್ರಗಳು ಕೆಲವು ಪ್ರದೇಶಗಳಲ್ಲಿ ಸೇನಾ ಜಮಾವಣೆಯತ್ತ ಮುಖಮಾಡಿವೆ. ಇಂಥಹ ಪರಿಸ್ಥಿತಿಯಲ್ಲಿ ಈ ರೀತಿಯ ವಾಹನಗಳು ಅತಿ ಮುಖ್ಯ ಎನ್ನಲಾಗುತ್ತಿದೆ.
ಚೀನಾದ ಸೇನೆಗೆ ಸರಿಸಮನಾಗಿ ನಿಲ್ಲುವ ಸಲುವಾಗಿ ಹಾಗೂ ಚೀನಾ ಸೇನೆಯ ಯುದ್ಧವಾಹನಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಈ ವಾಹನಗಳು ಸಾಕಷ್ಟು ಮಹತ್ವ ಪಡೆದುಕೊಳ್ಳಲಿವೆ.