ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದು ಐತಿಹಾಸಿಕ ನಿರ್ಣಯವಾಗಿದೆ ಎಂದು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವನೆ ಹೇಳಿದ್ದಾರೆ.
ಭಾರತೀಯ ಸೇನಾ ದಿನಾಚರಣೆ ಪ್ರಯುಕ್ತ, ಸೇನಾಧಿಕಾರಿಗಳನ್ನ ಕುರಿತು ಮಾತನಾಡಿರುವ ಅವರು, 370ನೇ ವಿಧಿ ರದ್ದು ಪಡಿಸಿದ್ದು, ಐತಿಹಾಸಿಕ ನಿರ್ಣಯವಾಗಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ದೇಶದ ಇತರ ರಾಜ್ಯಗಳೊಂದಿದೆ ಸಂಪರ್ಕ ಹೊಂದಲು ಸಾಧ್ಯವಾಯಿತು ಎಂದಿದ್ದಾರೆ.
ಇನ್ನು ಈ ನಿರ್ಣಯ ಪಶ್ಚಿಮದಲ್ಲಿರುವ ನೆರೆಯ ರಾಷ್ಟ್ರದ ಅನೇಕ ಯೋಜನೆಗಳಿಗೆ ಪೆಟ್ಟು ನೀಡಿತು. ಭಯೋತ್ಪಾದನೆ ವಿಚಾರದಲ್ಲಿ ಸಹಿಸಿಕೊಳ್ಳುವ ಮಾತೇ ಇಲ್ಲ. ಅದಕ್ಕಾಗಿ ನಾವು ಅನೇಕ ಆಯ್ಕೆಗಳನ್ನ ಹೊಂದಿದ್ದು, ಆ ಆಯ್ಕೆಗಳನ್ನ ಬಳಸಲು ಹಿಂಜರಿಯುವುದಿಲ್ಲ ಎಂದು ನಯವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಮುಂಬರುವ ದಿನಗಳಲ್ಲಿ ಉನ್ನತ ಮಟ್ಟದ ಕಾರ್ಯಾಚರಣೆ ನಡೆಸಲು ಸಿದ್ಧವಾಗಬೇಕಾಗಿದೆ. ಭಾರತೀಯ ಸೇನೆ, ಸವಾಲುಗಳನ್ನ ಎದುರಿಸಲು ಸಿದ್ಧವಾಗಿದ್ದು, ಭವಿಷ್ಯದಲ್ಲಿನ ನಿರೀಕ್ಷಿತ ಕಾರ್ಯಾಚರಣೆಗೆ ಸನ್ನದ್ಧವಾಗುತ್ತಿದೆ ಎಂದಿದ್ದಾರೆ.