ನವದೆಹಲಿ :ಗಡಿ ಮತ್ತು ಗಡಿಯೊಳಗೂ ಶೌರ್ಯದಿಂದ ಹೋರಾಡಿದ ವೀರಯೋಧರನ್ನು ಗೌರವಿಸಲು ಪ್ರತಿ ವರ್ಷ ಡಿಸೆಂಬರ್ 7ರಂದು 'ಸಶಸ್ತ್ರ ಪಡೆಗಳ ಧ್ವಜ ದಿನ'ವನ್ನಾಗಿ ಆಚರಿಸಲಾಗುತ್ತದೆ.
ಈ ದಿನ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿ ಸಲ್ಲಿಸಿದ ಸೇವೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ಈ ಧ್ವಜದ ಕೆಂಪು, ಗಾಢ ನೀಲಿ ಮತ್ತು ತಿಳಿ ನೀಲಿ ಬಣ್ಣಗಳು ಕ್ರಮವಾಗಿ ಭಾರತೀಯ ಭೂ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಸೇನೆ ಪ್ರತಿನಿಧಿಸುತ್ತವೆ.
1949ರಿಂದ, ಪ್ರತಿವರ್ಷ ಡಿಸೆಂಬರ್ 7ರಂದು ಹುತಾತ್ಮರನ್ನು ಮತ್ತು ಸಮವಸ್ತ್ರದಲ್ಲಿರುವ ಸೈನಿಕರನ್ನು ಗೌರವಿಸಲು ದೇಶಾದ್ಯಂತ ಸಶಸ್ತ್ರ ಪಡೆಗಳ ಧ್ವಜ ದಿನವನ್ನಾಗಿ ಆಚರಿಸಲಾಗುತ್ತದೆ. ಮತ್ತು ದೇಶದ ಗೌರವವನ್ನು ಕಾಪಾಡಲು ನಮ್ಮ ಗಡಿಗಳಲ್ಲಿ ಇವರು ನಿರಂತರ ಹೋರಾಟ ನಡೆಸುತ್ತಲೇ ಇದ್ದಾರೆ. ಸೈನಿಕರು ಯಾವುದೇ ''ದೇಶದ ಮಹತ್ವದ ಆಸ್ತಿಗಳಲ್ಲಿ ಒಬ್ಬರು'' ಅವರು ರಾಷ್ಟ್ರ ರಕ್ಷಕರು ಮತ್ತು ದೇಶದ ನಾಗರಿಕರ ರಕ್ಷಣೆಗೆಂದೇ ಪಣ ತೊಟ್ಟವರು.
ಕರ್ತವ್ಯಕ್ಕೋಸ್ಕರ ತಮ್ಮ ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ತ್ಯಾಗ ಮಾಡಿದ ಮಹಾನ್ ತ್ಯಾಗಿಗಳು. ತಾಯ್ನಾಡಿನ ಸೇವೆ ಮಾಡುತ್ತಾ, ಕಡೆಗೆ ತಮ್ಮ ಪ್ರಾಣವನ್ನೇ ಅರ್ಪಿಸುವ ವೀರರಿಗೆ ದೇಶವು ಎಂದಿಗೂ ಚಿರರುಣಿಯಾಗಿರುತ್ತದೆ. ಕರ್ತವ್ಯ ನಿರ್ವಹಿಸುತ್ತಲೇ ತಾಯ್ನಾಡಿನ ಉಳಿವಿಗಾಗಿಯೇ ಪ್ರಾಣತೆತ್ತ ಹುತಾತ್ಮ ವೀರರ ಬಗ್ಗೆ ಮಾತ್ರವಲ್ಲದೆ ಈ ತ್ಯಾಗದ ನಿರ್ಣಾಯಕ ಭಾಗವಾಗಿರುವ ಅವರ ಕುಟುಂಬಗಳ ಬಗ್ಗೆಯೂ ನಮ್ಮ ಕಾಳಜಿ ಹಾಗೂ ಮೆಚ್ಚುಗೆ ತೋರಿಸುವುದು ನಮ್ಮ ಕರ್ತವ್ಯ.
ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರಗಳು ಯೋಧರಿಗೆ ನೀಡಿರುವ ಸೌಲಭ್ಯಗಳ ಹೊರತಾಗಿಯೂ ಸೈನಿಕರಿಗೆ ಸ್ವಯಂಪ್ರೇರಿತವಾಗಿ ನಮ್ಮ ಬೆಂಬಲ, ಪುನರ್ವಸತಿ ಸೌಲಭ್ಯ ಮತ್ತು ಹಣಕಾಸಿನ ನೆರವು ನೀಡುವಲ್ಲಿ ಕೊಡುಗೆ ನೀಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಕರ್ತವ್ಯವಾಗಿದೆ. ಯುದ್ಧದಲ್ಲಿ ಗಾಯಗೊಂಡು ಅಂಗವಿಕಲರಾದ ಸೈನಿಕರು, ವೀರ ನಾರಿಯರು ಮತ್ತು ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಕುಟುಂಬಗಳನ್ನು ನೋಡಿಕೊಳ್ಳುವ ನಮ್ಮ ಬದ್ಧತೆಯನ್ನು ಈ ಧ್ವಜ ದಿನವು ಮುಂಚೂಣಿಗೆ ತರುತ್ತದೆ.
ಸಶಸ್ತ್ರ ಪಡೆಗಳ ಧ್ವಜ ದಿನ ಇತಿಹಾಸ :ಭಾರತ ರಕ್ಷಣಾ ಸಚಿವಾಲಯದ ಅಡಿಯಲ್ಲಿ 1949ರ ಆಗಸ್ಟ್ 28ರಂದು ರಚಿಸಲಾದ ಸಮಿತಿಯಲ್ಲಿ ಡಿಸೆಂಬರ್ 7ರಂದು ಸಶಸ್ತ್ರ ಧ್ವಜ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಇದರ ಉದ್ದೇಶ ಸಣ್ಣ ಧ್ವಜಗಳು, ಬ್ಯಾಡ್ಜ್ಗಳು, ಸ್ಟಿಕರ್ಗಳು ಮತ್ತು ಇತರ ವಸ್ತುಗಳನ್ನು ವಿತರಿಸಲು ಹಣ ಸಂಗ್ರಹಿಸುವುದಾಗಿತ್ತು.