ಮಥುರಾ(ಉತ್ತರ ಪ್ರದೇಶ):ರಾಷ್ಟ್ರವ್ಯಾಪಿ ಲಾಕ್ಡೌನ್ ನಡುವೆಯೂ ನಾಲ್ಕು ಶಸ್ತ್ರಸಜ್ಜಿತ ದಾಳಿಕೋರರು ಮಂಗಳವಾರ ಮಥುರಾದ ಗ್ರಾಮೀಣ ಬ್ಯಾಂಕ್ ದೋಚಿ 21 ಲಕ್ಷ ರೂಪಾಯಿ ನಗದು ಜೊತೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಬ್ಯಾಂಕ್ನಲ್ಲಿ ಕೇವಲ ಮೂವರು ಸಿಬ್ಬಂದಿಗಳಿದ್ದರು. ಈ ವೇಳೆ ಮುಸುಕುಧಾರಿ ದರೋಡೆಕೋರರು ಆರ್ಯವರ್ಟಾದ ಗ್ರಾಮೀಣ ಬ್ಯಾಂಕ್‌ನ ದಾಮೋದರ್ಪುರ ಶಾಖೆಗೆ ನುಗ್ಗಿದ್ದಾರೆ.
ಬ್ಯಾಂಕ್ ಸಿಬ್ಬಂದಿ ನರೇಂದ್ರ ಚೌಧರಿ ಈ ಬಗ್ಗೆ ಪ್ರತಿಕ್ರಿಯಿಸಿ, ಮುಖವಾಡದ ವ್ಯಕ್ತಿಯೊಬ್ಬ ಬ್ಯಾಂಕ್‌ನೊಳಗೆ ಪ್ರವೇಶಿಸಿ ತಲೆಗೆ ಬಂದೂಕು ಹಿಡಿದ. ಆ ನಂತರ, ಇತರ ಮೂವರು ಖದೀಮರು ಬ್ಯಾಂಕಿನೊಳಗೆ ಬಂದು ಸಹಾಯಕ ವ್ಯವಸ್ಥಾಪಕ ನೀಲಂ ಸಿಂಗ್ ಮತ್ತು ಕ್ಯಾಷಿಯರ್ ಶಕ್ತಿ ಸಕ್ಸೇನಾ ಅವರ ಬಳಿ ಪಿಸ್ತೂಲ್ ತೋರಿಸಿ, ಸುಮ್ಮನಿರುವಂತೆ ಬೆದರಿಸಿದರು. ಬಳಿಕ ಹಲ್ಲೆಕೋರರು ನಮ್ಮ ಮೊಬೈಲ್ ಫೋನ್ ತೆಗೆದುಕೊಂಡರು. ಇದಾದ ನಂತರ, ಸಹಾಯಕ ಮ್ಯಾನೇಜರ್ ಅವರನ್ನು ವಾಶ್ ರೂಂನಲ್ಲಿ ಲಾಕ್ ಮಾಡಿ ಕ್ಯಾಷಿಯರ್ ಅವರಿಂದ ಸ್ಟ್ರಾಂಗ್ ರೂಂ ಅನ್ನು ತೆರೆಯುವಂತೆ ಒತ್ತಾಯಿಸಿ ನಂತರ ಅಲ್ಲಿದ್ದ 21,07,127 ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಮಥುರಾ ಎಸ್‌ಎಸ್‌ಪಿ ಗೌರವ್ ಗ್ರೋವರ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣ ಭೇದಿಸಲು ಐದು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಬ್ಯಾಂಕಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.