ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಮತ್ತೆ ಹಳಿಯ ಮೇಲೆ ಭಾರತೀಯ ರೈಲ್ವೆ !

ಅಮೆರಿಕಾ, ಚೀನಾ ಹಾಗೂ ರಷ್ಯಾ ನಂತರ ಭಾರತದ್ದು ಅತಿದೊಡ್ಡ ರೈಲ್ವೆ ವ್ಯವಸ್ಥೆ ಆಗಿದೆ. ವೇಗದಲ್ಲಿ ದಾಖಲೆ ಮುರಿಯಲು ಮತ್ತು ತಾಂತ್ರಿಕ ಜ್ಞಾನದ ಜೊತೆಗೆ ಅತ್ಯಾಧುನಿಕ ಸೌಕರ್ಯ ಒದಗಿಸುವಲ್ಲಿ ಆ ದೇಶಗಳು ಗಮನ ಸೆಳೆದಿದ್ದರೂ ಭಾರತದಲ್ಲಿ ಅನೇಕ ಯೋಜನೆಗಳು ಹೀನಾಯ ಸ್ಥಿತಿಯಲ್ಲಿ ಇವೆ.

By

Published : Dec 31, 2019, 2:21 PM IST

Updated : Dec 31, 2019, 6:43 PM IST

ಮತ್ತೆ ಹಳಿಯ ಮೇಲೆ ಭಾರತೀಯ ರೈಲ್ವೆ, anxiety-condition-for-indian-railway
ಮತ್ತೆ ಹಳಿಯ ಮೇಲೆ ಭಾರತೀಯ ರೈಲ್ವೆ

ದೇಶದ ಪ್ರಗತಿಯ ಮುಖ ಮತ್ತು ಅದರ ಜೀವಸೆಲೆ ಆಗಬೇಕಿದ್ದ ಭಾರತೀಯ ರೈಲ್ವೆ ಈ ದಿನಗಳಲ್ಲಿ ಆತಂಕದ ಸ್ಥಿತಿಯಲ್ಲಿ ಇದೆ. ಕೇಂದ್ರ ರೈಲ್ವೆ ಸಚಿವ ಪೀಯುಷ್ ಗೋಯಲ್ ಅವರು ‘ ಕಳೆದ 6.5 ದಶಕಗಳಿಂದ ರೈಲ್ವೆ ಮೂಲ ಸೌಕರ್ಯದಲ್ಲಿ ಕೇವಲ ಶೇ 30 ರಷ್ಟು ಸುಧಾರಣೆ ಆಗಿದೆ ’ ಎಂದು ತಮ್ಮ ಹೇಳಿಕೆ ಒಂದರಲ್ಲಿ ತಿಳಿಸಿದ್ದರು. ಈ ಹೇಳಿಕೆ ನಿಧಾನಗತಿಯ ಅಭಿವೃದ್ಧಿಗೆ ಹಿಡಿದ ಕನ್ನಡಿ ಆಗಿದೆ.

ಭಾರತೀಯ ರೈಲ್ವೆಯ ಕಾರ್ಯ ನಿರ್ವಹಣೆಯ ಅನುಪಾತ (Operational ratio) ಆಧರಿಸಿ ಮಹಾಲೆಕ್ಕ ಪರಿಶೋಧಕರು ( ಸಿಎಜಿ ) ನೀಡಿರುವ ವರದಿಯಲ್ಲಿ, ರೈಲ್ವೆ ತಾನು ಗಳಿಸಿದ ಆದಾಯಕ್ಕಿಂತಲೂ ಹೆಚ್ಚು ಖರ್ಚು ಮಾಡುತ್ತಿದೆ. ಹೀಗಾಗಿ ಇಲಾಖೆ ತನ್ನ ಕಾರ್ಯ ನಿರ್ವಹಣೆ ವಿಧಾನವನ್ನು ಮರುಪರಿಶೀಲಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಉಲ್ಲೇಖಿಸಿದೆ.

ಇದರ ಅಂಗವಾಗಿ 2030 ರ ಹೊತ್ತಿಗೆ ರೈಲ್ವೆ ಇಲಾಖೆಯನ್ನು ಲಾಭದಾಯಕ ಹಳಿಗೆ ತರಲು ಕೇಂದ್ರ ಸರ್ಕಾರ 50 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ರೂಪಿಸಿದೆ. ಬಹುಶಃ ಸಂಪೂರ್ಣ ಮೊತ್ತವನ್ನು ಸರಿಯಾಗಿ ಬಳಕೆ ಮಾಡುವ ಉದ್ದೇಶದಿಂದ ರೈಲ್ವೆ ಮಂಡಳಿಯನ್ನು ಮರುಸಂಘಟಿಸಲು ಕೇಂದ್ರ ಸಂಪುಟ ಇತ್ತೀಚೆಗೆ ಹೊಸದಾಗಿ ಹಸಿರು ನಿಶಾನೆ ತೋರಿತ್ತು. ಈ ತಿಂಗಳ ಮೊದಲ ವಾರದಲ್ಲಿ ರೈಲ್ವೆ ಮಂಡಳಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ಪರಿವರ್ತನಾ ಸಂಗೋಷ್ಠಿ’ ಅಥವಾ ‘ಬದಲಾವಣೆಗಾಗಿ ಒಂದು ವಿಚಾರಗೋಷ್ಠಿ’ ಎಂಬ ಕಾರ್ಯಕ್ರಮ ಆಯೋಜನೆ ಮಾಡಿತ್ತು.

ಮಂಡಳಿಯ ಮರುಸಂಘಟನೆಗಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ಚಿಂತನ - ಮಂಥನ ನಡೆಸಲು ರೈಲ್ವೆಯ ಉನ್ನತ ಅಧಿಕಾರಿಗಳ ಉಪಸ್ಥಿತಿ ಇತ್ತು. ಸಚಿವ ಸಂಪುಟದ ಅನುಮೋದನೆಯೊಂದಿಗೆ, ಈವರೆಗೆ ಚಾಲ್ತಿಯಲ್ಲಿ ಇರುವ ಎಂಟು ವಿಧದ ಅಖಿಲ ಭಾರತ ಸೇವೆಗಳ ಬದಲು ಕೇವಲ ಏಕ ಭಾರತೀಯ ರೈಲ್ವೆ ಕೇಡರ್ ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಮಾತು ಕೇಳಿಬರುತ್ತಿದೆ. ಅಂತೆಯೇ, ಹಲವಾರು ಇಲಾಖೆಗಳ ಬದಲು, ಆಗ ರೈಲ್ವೆಗೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ( ಆರ್​ ಪಿಎಫ್ ) ಮತ್ತು ವೈದ್ಯಕೀಯ ಸೇವಾ ಘಟಕ ಮಾತ್ರ ಇರಲಿದೆ.

ಅಧಿಕಾರಿಗಳ ಪ್ರಕಾರ, ಈ ಬದಲಾವಣೆಗೆ ಕೇಂದ್ರ ಸಮ್ಮತಿ ಸೂಚಿಸಿದ್ದು, ಅನೇಕ ಕೇಡರ್ಗಳು ಮತ್ತು ಇಲಾಖೆಗಳ ನಡುವೆ ಸಂಯೋಜನೆ ತರುವ ಮೂಲಕ ರೈಲುಗಳ ನಿರ್ವಹಣೆಯ ಸಮಸ್ಯೆ ನಿವಾರಿಸಲು ಮುಂದಾಗಿದೆ. ಬದಲಾವಣೆ ತರುವ ಉದ್ದೇಶದಿಂದ ರೂಪಿಸಲಾದ ಪ್ರಕಾಶ್ ಟಂಡನ್ ಸಮಿತಿ (1994), ರಾಕೇಶ್ ಮೋಹನ್ ಸಮಿತಿ (2001), ಸ್ಯಾಮ್ ಪಿತ್ರೋಡಾ ಸಮಿತಿ (2012) ಬಿಬಕೆ ದೇವ್ರಾಯ್ ಸಮಿತಿಗಳು (2015) ಮಾಡಿದ ಶಿಫಾರಸು ಕಾಗದದ ಮೇಲೆ ಹಾಗೆಯೇ ಉಳಿದಿವೆ. ರೈಲ್ವೆ ವ್ಯವಸ್ಥೆಯ ಅಸಮ ಕಾರ್ಯ ನಿರ್ವಹಣೆಯ ಈ ಸಂದರ್ಭದಲ್ಲಿ, ಉದ್ದೇಶಿತ ಮರುಸಂಘಟನೆಯ ಕೆಲಸ ರೈಲ್ವೆಯನ್ನು ಹೇಗೆ ಮತ್ತೆ ಸರಿದಾರಿಗೆ ತರುತ್ತದೆ ಎಂದು ಕಾದು ನೋಡಬೇಕಿದೆ.

1905 ರಿಂದಲೂ ರೈಲ್ವೆ ವ್ಯವಸ್ಥೆಯಲ್ಲಿ ಸಾರಿಗೆ, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಟೆಲಿಕಾಂ ಸೇವಾ ವಿಭಾಗಗಳು ಪ್ರಾಬಲ್ಯ ಮೆರೆಯುತ್ತಿವೆ ಎಂಬುದು ಊಹಿಸಲಾಗದ ಸಂಗತಿ. 'ವಂದೇ ಭಾರತ್ ಎಕ್ಸ್​ಪ್ರೆಸ್' ( ಟ್ರೇನ್ 18 ) ಚಾಲನೆ ಪಡೆಯಲು ಉಂಟಾದ ವಿಳಂಬವು ಎಲೆಕ್ಟ್ರಿಕ್ ಮತ್ತು ಮೆಕಾನಿಕಲ್ ವಿಭಾಗಗಳ ನಡುವಿನ ಗಂಭೀರ ಅಸಹಕಾರಕ್ಕೆ ಒಂದು ಉದಾಹರಣೆ ಆಗಿದ್ದು, ಅದು ಇಲ್ಲಿಯ ತನಕ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಮಂಡಳಿಯ ಅನೇಕ ಸದಸ್ಯರ ಸ್ವಾರ್ಥ ಹುನ್ನಾರಗಳನ್ನು ನಿಗ್ರಹಿಸಲು ಸದಸ್ಯರ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸುವುದು ಎದೆಗಾರಿಕೆಯ ನಿರ್ಧಾರ ಆಗಿದೆ.

ಮಾನವ ಸಂಪನ್ಮೂಲ ಇಲಾಖೆಯ ಉಸ್ತುವಾರಿ ಹೊತ್ತಿರುವ ಮಹಾನಿರ್ದೇಶಕರು ಈಗ ನೇರವಾಗಿ ಮಂಡಳಿಯ ಅಧ್ಯಕ್ಷರ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅವರು ಸಿಇಒ ( ಮುಖ್ಯ ಕಾರ್ಯನಿರ್ವಹಣಾಧಿಕಾರಿ ) ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮಂಡಳಿಯ ನಾಲ್ಕು ಸದಸ್ಯರು ವಿಸ್ತರಣೆ, ಮೂಲಸೌಕರ್ಯ, ಸಾರಿಗೆ ಮತ್ತು ಹಣಕಾಸು ವ್ಯವಸ್ಥೆಯನ್ನು ನೇರವಾಗಿ ನೋಡಿಕೊಳ್ಳಬೇಕಾಗುತ್ತದೆ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಇರುವಂತೆ ಅನುಭವ ಮತ್ತು ಪರಿಣತಿ ಹೊಂದಿರುವ ವ್ಯಕ್ತಿಗಳ ನೇಮಕದ ಪರಿಕಲ್ಪನೆ; ಬಡ್ತಿ ವೇಳೆ ಹಿರಿತನಕ್ಕಿಂತ ಕಾರ್ಯಕ್ಷಮತೆ ಮುಖ್ಯ ಎಂಬ ಸ್ಪಷ್ಟತೆ; - ಇವು ಸಕಾರಾತ್ಮಕ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿರುವುದರ ಸೂಚನೆಗಳು ! ! ಈ ನಿರ್ಧಾರ / ಕ್ರಿಯೆ ಹೇಗೆ ಗ್ರೂಪ್ - ಎ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡುವುದು ಕುತೂಹಲಕರ ಸಂಗತಿ. ಪ್ರಸ್ತಾವನೆ ಇಡಿಯಾಗಿ ಅನುಷ್ಠಾನಕ್ಕೆ ಬಂದರೆ, ರೈಲ್ವೆ ಕಾರ್ಯನಿರ್ವಹಣೆಯಲ್ಲಿ ಇರುವ ಕಂದರಗಳನ್ನು ತೆರವುಗೊಳಿಸಿ ಆ ಮೂಲಕ ಹೊಸ ಭರವಸೆ ಮೂಡಿಸಿದಂತೆ ಆಗುತ್ತದೆ.

ಹಣದ ದುರುಪಯೋಗ, ಮೂಲಸೌಕರ್ಯ ಮತ್ತು ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವಲ್ಲಿ ಹಾಗೂ ಸುರಕ್ಷತಾ ವಿಷಯಗಳಲ್ಲಿ ತೋರುವ ಅಜಾಗರೂಕತೆ, ಸಬ್ಸಿಡಿಗಳ ದುರ್ಬಳಕೆ ಇತ್ಯಾದಿ ಸಂಗತಿಗಳಿಂದಾಗಿ ಭಾರತೀಯ ರೈಲ್ವೆ ಕುಖ್ಯಾತಿ ಪಡೆದಿದೆ ಎಂಬುದು ರಾಜಕೀಯ ಜಾಲದಲ್ಲಿ ಸಿಲುಕಿರುವ ಎಲ್ಲರಿಗೂ ತಿಳಿದಿರುವ ಸಂಗತಿ. 1950 - 2016ರ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಣೆ ಕ್ರಮವಾಗಿ ಶೇ 1344 ಮತ್ತು ಶೇ 1642 ಹೆಚ್ಚಾಗಿದೆ ಎಂಬುದನ್ನು ಸಂದೀಪ್ ಬಂಡೋಪಾಧ್ಯಾಯ ಸಮಿತಿಯ ಅಂಕಿ ಅಂಶಗಳು ತಿಳಿಸಿವೆ.

ಇಷ್ಟಾದರೂ ರೈಲ್ವೆ ಜಾಲದ ವಿಸ್ತರಣೆ ಶೇ 25ರಷ್ಟು ಕೂಡ ಹೆಚ್ಚಳ ಆಗಿಲ್ಲ. ಈ ವರದಿಯು ರೈಲ್ವೆ ಆಡಳಿತದ ದೊಡ್ಡ ದೊಡ್ಡ ಮಂದಿ ದಶಕಗಳಿಂದ ತೋರಿಸುತ್ತಿರುವ ಆಲಸ್ಯಕ್ಕೆ ಸಾಕ್ಷಿ ಆಗಿದೆ. ರೂಪಾಂತರ, ಸುಧಾರಣೆ ಹಾಗೂ ಶುದ್ಧೀಕರಣದ ಜೊತೆಗೆ ತುರ್ತು ಅಗತ್ಯ ಎನಿಸಿರುವ ರಾಷ್ಟ್ರಮಟ್ಟದ ಜಾಲ ಹೆಣೆದ ಬಳಿಕ 2023 ರ ವೇಳೆಗೆ, ಭಾರತೀಯ ರೈಲ್ವೆ ಸಂಪೂರ್ಣ ವಿದ್ಯುದೀಕರಣಗೊಳ್ಳಲಿದೆ ಎಂಬುದು ಮೋದಿ ಸರ್ಕಾರ ನೀಡಿರುವ ಭರವಸೆ. 2020ರ ಏಪ್ರಿಲ್ ನಿಂದ ಹೊಸ ಸಿಗ್ನಲಿಂಗ್ ವ್ಯವಸ್ಥೆ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ.

ಅಮೆರಿಕಾ, ಚೀನಾ ಹಾಗೂ ರಷ್ಯಾ ನಂತರ ಭಾರತದ್ದು ಅತಿದೊಡ್ಡ ರೈಲ್ವೆ ವ್ಯವಸ್ಥೆ ಆಗಿದೆ. ವೇಗದಲ್ಲಿ ದಾಖಲೆ ಮುರಿಯಲು ಮತ್ತು ತಾಂತ್ರಿಕ ಜ್ಞಾನದ ಜೊತೆಗೆ ಅತ್ಯಾಧುನಿಕ ಸೌಕರ್ಯ ಒದಗಿಸುವಲ್ಲಿ ಆ ದೇಶಗಳು ಗಮನ ಸೆಳೆದಿದ್ದರೂ ಭಾರತದಲ್ಲಿ ಅನೇಕ ಯೋಜನೆಗಳು ಹೀನಾಯ ಸ್ಥಿತಿಯಲ್ಲಿ ಇವೆ. ಸುಲಭಕ್ಕೆ ಹೊಂದಿಕೊಳ್ಳುವ ವಿನ್ಯಾಸ ಮತ್ತು ಬಲಿಷ್ಠ ನಿಯಂತ್ರಣ ಕಮಾಂಡ್ ವ್ಯವಸ್ಥೆಗಳ ಆವಿಷ್ಕಾರದಲ್ಲಿ ಭಾರತ ಇನ್ನೂ ಹಿಂದೆ ಉಳಿದಿದೆ. ವೈಜ್ಞಾನಿಕ ಯೋಜನೆ ಮತ್ತು ಪರಿಣಾಮಕಾರಿ ಕ್ರಿಯಾಯೋಜನೆಯ ಸಮಾನಾಂತರ ಹಳಿಗಳ ಮೇಲೆ ಪ್ರಗತಿಯ ಗಾಡಿ ಚಲಿಸಲಿದೆ ಎಂಬುದು ಈ ಹಿಂದೆ ಮೋದಿ ಸರ್ಕಾರ ದೇಶದ ನಾಗರಿಕರಿಗೆ ನೀಡಿದ ಭರವಸೆ ಆಗಿತ್ತು.

ರೈಲ್ವೆಯ ವೃತ್ತಿಪರ ದಕ್ಷತೆ ಎತ್ತಿ ತೋರಿಸುವಲ್ಲಿ ಸರ್ಕಾರ ಯಶಸ್ವಿಯಾದರೆ, ಅದು ದೇಶಕ್ಕೆ ಮತ್ತು ಅದರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ದೊಡ್ಡ ಸಹಾಯ ಮಾಡಿದಂತೆ ಆಗುತ್ತದೆ. ರೈಲ್ವೆ ಕಾರ್ಯನಿರ್ವಹಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಪ್ರಜ್ಞೆ ತಂದಾಗ ಮಾತ್ರ ರೈಲ್ವೆ ಮಂಡಳಿಯ ಮರುಸಂಘಟನೆ ಒಂದು ಮೈಲಿಗಲ್ಲು ಆಗಲಿದೆ. ಇದರಿಂದ ಖಂಡಿತವಾಗಿಯೂ ಸಂಕಷ್ಟದಲ್ಲಿ ಇರುವ ಭಾರತೀಯ ರೈಲ್ವೆಯನ್ನು ಸರಿಯಾದ ಹಾದಿಗೆ ತಂದಾಗುತ್ತದೆ .

Last Updated : Dec 31, 2019, 6:43 PM IST

ABOUT THE AUTHOR

...view details